ರಾಜ್ಯ

ಬೆಂಗಳೂರು: ಪೀಕ್ ಅವರ್ ನಲ್ಲಿ ಮೆಟ್ರೋ ಕಾಮಗಾರಿ ಭಾರೀ ವಾಹನಗಳ ಸಂಚಾರಕ್ಕೆ ವಿಶೇಷ ಅನುಮತಿ!

Manjula VN

ಬೆಂಗಳೂರು: ಪೀಕ್ ಅವರ್ ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಸಂಚಾರ ಪೊಲೀಸರು, ಬೆಂಗಳೂರು ಮೆಟ್ರೋ ಕಾಮಗಾರಿಗಾಗಿ ನಿರ್ಮಾಣ ಸಾಮಾಗ್ರಿಗಳ ಸಾಗಿಸುವ ಭಾರೀ ವಾಹನಗಳಿಗೆ ವಿಶೇಷ ಅನುಮತಿಯನ್ನು ನೀಡಿದ್ದಾರೆ.

ಮೆಟ್ರೋದ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, “ಬಿಎಂಆರ್‌ಸಿಎಲ್ ಕೆಲಸದ ಸ್ಥಳಕ್ಕೆ ಕಾಂಕ್ರೀಟ್ ಸಾಗಿಸಲು ಟ್ರಾನ್ಸಿಟ್ ಮಿಕ್ಸರ್‌ಗಳನ್ನು ಬಳಕೆ ಮಾಡಲಾಗುತ್ತದೆ, ಇದು ಭಾರೀವಾಹನಗಳ ವರ್ಗದ ಅಡಿಯಲ್ಲಿ ಬರುತ್ತದೆ. ಅಂತಹ ಎಲ್ಲಾ ವಾಹನಗಳ ಸಂಚಾರಕ್ಕೆ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ನಿರ್ಬಂಧ ವಿಧಿಸಲಾಗಿದೆ. ಇದರಿಂದಾಗಿ ಮೆಟ್ರೋ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಸಮಸ್ಯೆಗಳು ಎದುರಾಗಿತ್ತು ಎಂದು ಹೇಳಿದ್ದಾರೆ.

ಎಲಿವೇಟೆಡ್ ಮೆಟ್ರೊ ಕಾಮಗಾರಿಗೆ ರಾತ್ರಿ ವೇಳೆ ಕಾಂಕ್ರೀಟ್ ಸ್ಥಳಾಂತರಿಸಬಹುದು, ಆದರೆ ಭೂಗತ ಭಾಗದ ಕಾಮಗಾರಿಗೆ ಕಾಂಕ್ರೀಟ್ ಸುರಿಯುವುದನ್ನು ನಿರಂತರವಾಗಿ ಮಾಡುವುದು ಅತ್ಯಗತ್ಯವಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಅನುಮತಿ ಕೋರಿ ನಾವು ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದೆವು. ಇದರಂತೆ ಕಾರ್ಯನಿರ್ವಹಿಸುವ ವಾಹನ ಸಂಖ್ಯೆಗಳ ಪಟ್ಟಿಯನ್ನು ಕಳುಹಿಸುವಂತೆ ಸೂಚಿಸಿದ್ದರು. ಈ ಪಟ್ಟಿಯನ್ನು ಅಧಿಕಾರಿಗಳಿಗೆ ರವಾನಿಸಿದ್ದೇವೆಂದು ತಿಳಿಸಿದ್ದಾರೆ.

ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂಎ ಸಲೀಮ್ ಅವರು ಮಾತನಾಡಿ, “ಬೆಳಿಗ್ಗೆ ಮತ್ತು ಸಂಜೆಯ ಪೀಕ್ ಅವರ್‌ಗಳ ನಡುವೆ ದಿನಕ್ಕೆ ಆರು ಗಂಟೆಗಳ ಕಾಲ ನಾವು ಭಾರೀ ವಾಹನಗಳ ಮೇಲೆ ನಿರ್ಬಂಧ ಹೇರಿದ್ದೇವೆ. ಬಿಎಂಆರ್‌ಸಿಎಲ್‌ಗೆ ತಮ್ಮ ವಾಹನಗಳನ್ನು ಓಡಿಸಲು ಇನ್ನೂ 18 ಗಂಟೆಗಳ ಕಾಲಾವಕಾಶವಿದೆ. ಆದಾಗ್ಯೂ, ನಿರ್ಮಾಣ-ಸಂಬಂಧಿತ ಚಟುವಟಿಕೆಗಳಿಗಾಗಿ ಅವರು ತಮ್ಮ ವಾಹನಗಳನ್ನು ಚಲಾಯಿಸಲು ಅನುಮತಿ ಕೋರಿದಾಗಲೆಲ್ಲಾ ಅದಕ್ಕೆ ನಾವು ಅನುಮತಿ ನೀಡುತ್ತೇವೆಂದು ಹೇಳಿದ್ದಾರೆ.

SCROLL FOR NEXT