ರಾಜ್ಯ

ಬೋರ್ವೆಲ್, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಹಗರಣ: ತನಿಖೆಗೆ ಇಡಿ ಮುಂದು, ಬಿಬಿಎಂಪಿಗೆ ನೋಟಿಸ್ ಜಾರಿ!

Manjula VN

ಬೆಂಗಳೂರು: ನಗರದಲ್ಲಿ ಬೋರ್ವೆಲ್ ಕೊರೆಯುವುದು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ನೆಪದಲ್ಲಿ ಕೋಟ್ಯಾಂತರ ರುಪಾಯಿಗಳ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಬಿಎಂಪಿ ವಿರುದ್ಧ ತನಿಖೆ ಕೈಗೊಳ್ಳಲು ಮುಂದಾಗಿದ್ದಾರೆ.

ತನಿಖೆಗೆ ಮುಂದಾಗಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಮಗಾರಿಗಳ ವಿವರ ನೀಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನೋಟಿಸ್ ಕಳುಹಿಸಿದೆ ಎಂದು ತಿಳಿದುಬಂದಿದೆ.

ಇದನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಖಚಿತಪಡಿಸಿದ್ದಾರೆ. ಇಡಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ವಿಚಾರಣೆಗೆ ಎಲ್ಲಾ ವಿವರಗಳನ್ನು ನೀಡಲು ಬಿಬಿಎಂಪಿ ಇಂಜಿನಿಯರ್-ಇನ್-ಚೀಫ್ ಬಿಎಸ್ ಪ್ರಹ್ಲಾದ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಹೇಳಿದ್ದಾರೆ.

2016 ರಿಂದ 2019 ರ ನಡುವೆ ಐದು ಬಿಬಿಎಂಪಿ ವಲಯಗಳಾದ ದಾಸರಹಳ್ಳಿ, ಮಹದೇವಪುರ, ಆರ್‌ಆರ್ ನಗರ, ಬೊಮ್ಮನಹಳ್ಳಿ ಮತ್ತು ಯಲಹಂಕದಲ್ಲಿ ಕೈಗೆತ್ತಿಕೊಂಡ 969 ಕೋಟಿ ರೂ.ಗಳ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ದೂರುದಾರ ಬಿಜೆಪಿ ಮುಖಂಡ ಎನ್‌ಆರ್ ರಮೇಶ್ ಹೇಳಿದ್ದಾರೆ.

ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಎಂಜಿನಿಯರ್‌ಗಳು ಮತ್ತು ಸಹಾಯಕ ಎಂಜಿನಿಯರ್‌ಗಳು ಅವ್ಯವಹಾರದಲ್ಲಿ ತೊಡಗಿದ್ದಾರೆಂದು ಆರೋಪಿಸಿದ್ದಾರೆ.

ಒಟ್ಟು 969 ಕೋಟಿ ವೆಚ್ಚದಲ್ಲಿ 9,588 ಬೋರ್‌ವೆಲ್‌ಗಳನ್ನು ಕೊರೆದು 976 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಪಾಲಿಕೆ ತಿಳಿಸಿದೆ. ವಾಸ್ತವದಲ್ಲಿ ಶೇ 25ರಷ್ಟು ಕಾಮಗಾರಿಯೂ ಆಗಿಲ್ಲ. ದುಬಾರಿ ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಹಣವನ್ನು ಲೂಟಿ ಮಾಡಲಾಗಿದೆ.

ನಾನು ಮೇ 16, 2019 ರಂದು ಎಸಿಬಿಗೆ ದೂರು ನೀಡಿದ್ದೇನೆ. ಹಗರಣವು 100 ಕೋಟಿ ರೂ.ಗೂ ಹೆಚ್ಚು ಆಗಿರುವುದರಿಂದ, ಇದು 'ಮನಿ ಲಾಂಡರಿಂಗ್ ಆಕ್ಟ್'ಗೆ ಸಂಬಂಧಿಸಿದ ಪ್ರಕರಣವಾಗಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಇಡಿ ಕೈಗೊಳ್ಳುವುದು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 12 ರಂದು ಇಡಿ ಮುಂದೆ ಹಾಜರಾಗುವಂತೆ ನನ್ನನ್ನು ಕೇಳಲಾಗಿತ್ತು. ಇಡಿ ಮುಂದೆ ಹಾಜರಾಗಿ 30 ಪುಟಗಳ ಹೇಳಿಕೆಯನ್ನು ನೀಡಿದ್ದೇನೆ ಎಂದು ರಮೇಶ್ ಅವರು ಹೇಳಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಗಿರಿನಾಥ್ ಅವರು, “ಬಿಬಿಎಂಪಿ ಹೊರ ವಲಯಗಳಲ್ಲಿ 2016-2019 ರವರೆಗಿನ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಕುರಿತು ಇಡಿ ಮಾಹಿತಿ ಕೇಳಿದೆ. ಮೊದಲು ಎಸಿಬಿಗೆ ದೂರು ಸಲ್ಲಿಸಿ ನಂತರ ಇಡಿಗೆ ವರ್ಗಾಯಿಸಲಾಗಿತ್ತು. ನವೆಂಬರ್‌ನಲ್ಲಿ ನಮಗೆ ನೋಟಿಸ್ ಬಂದಿದ್ದು, ಇಡಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಬಿಎಸ್ ಪ್ರಹ್ಲಾದ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT