ರಾಜ್ಯ

ಹವಾಮಾನ ವೈಪರೀತ್ಯ: ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ಏರ್ ಇಂಡಿಯಾ ವಿಮಾನ ಬೆಂಗಳೂರಿಗೆ ಡೈವರ್ಟ್!

Lingaraj Badiger

ಬೆಂಗಳೂರು: ಸೌದಿ ಅರೇಬಿಯಾದ ದಮ್ಮಾಮ್‌ನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಮಂಗಳವಾರ ಹವಾಮಾನ ವೈಪರೀತ್ಯದಿಂದ ಬೆಂಗಳೂರಿಗೆ ತಿರುಗಿಸಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಐಎಕ್ಸ್ 886 ವಿಮಾನವು ಸುಮಾರು ಏಳು ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾಗಿ ಮಧ್ಯಾಹ್ನ 3 ಗಂಟೆಗೆ ಟೇಕಾಫ್ ಆಯಿತು.

ಸೋಮವಾರ ರಾತ್ರಿ 10.30ಕ್ಕೆ ದಮ್ಮಾಮ್‌ನಲ್ಲಿರುವ ಕಿಂಗ್ ಫಹದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ ಮಂಗಳವಾರ ಬೆಳಗ್ಗೆ 5.25ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದೆ ಬೆಳಗ್ಗೆ 8 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿತ್ತು. 

ಅಂತಿಮವಾಗಿ ಅದು ಕೆಐಎಯಿಂದ ಮಧ್ಯಾಹ್ನ 2.57 ಕ್ಕೆ ಹೊರಟು, ನಿಗದಿತ ಆಗಮನದ ಸಮಯಕ್ಕಿಂತ 9.5 ಗಂಟೆಗಳ ತಡವಾಗಿ 3.35ಕ್ಕೆ ಸುರಕ್ಷಿತವಾಗಿ ಮಂಗಳೂರಿನಲ್ಲಿ ಲ್ಯಾಂಡ್ ಆಯಿತು.

"ಹವಾಮಾನದ ಕಾರಣದಿಂದ ವಿಮಾನ ವಿಳಂಬವಾಗಿದೆ. ಪ್ರಯಾಣಿಕರಿಗೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಒದಗಿಸಲಾಗಿದೆ ಮತ್ತು ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದ ಅವಧಿಯಲ್ಲಿ ಉತ್ತಮ ಕಾಳಜಿ ವಹಿಸಲಾಗಿದೆ" ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.

SCROLL FOR NEXT