ರಾಜ್ಯ

ಕೇಂದ್ರ ಸರ್ಕಾರದ ಧ್ವಜ ಸಂಹಿತೆಗೆ ತಿದ್ದುಪಡಿ; ಹುಬ್ಬಳ್ಳಿ ಖಾದಿ ಘಟಕ ನಷ್ಟದತ್ತ!

Srinivasamurthy VN

ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಧ್ವಜ ಸಂಹಿತೆಯಿಂದಾಗಿ ಹುಬ್ಬಳ್ಳಿಯಲ್ಲಿರುವ ಖ್ಯಾತ ಖಾದಿ ಘಟಕ ನಷ್ಟದತ್ತ ಮುಖ ಮಾಡಿದೆ.

ಹೌದು ಕೇಂದ್ರ ಸರ್ಕಾರದ ಕ್ರಮದಿಂದಾಗಿ ಸಂಕಷ್ಟದಲ್ಲಿರುವ ಖಾದಿ ಉದ್ಯಮವು ಕರಾಳ ಭವಿಷ್ಯವನ್ನು ಎದುರಿಸುತ್ತಿದ್ದು, ಕೆಲವು ತಿಂಗಳ ಹಿಂದೆ, ಕೇಂದ್ರ ಸರ್ಕಾರವು 'ಹರ್ ಘರ್ ತಿರಂಗಾ' ಕಾರ್ಯಕ್ರಮದ ಅಡಿಯಲ್ಲಿ ಭಾರತದ ಎಲ್ಲಾ ನಿವಾಸಿಗಳು ಸ್ವಾತಂತ್ರ್ಯ ದಿನಾಚರಣೆಯಂದು ಆಗಸ್ಟ್ 15 ರಂದು ತ್ರಿವರ್ಣ ಧ್ವಜಗಳನ್ನು ಹಾರಿಸಬೇಕೆಂದು ಘೋಷಿಸಿತು. ಪರಿಣಾಮ ಸ್ವಾತಂತ್ರ್ಯ ದಿನದಂದು ಹೆಚ್ಚಿನ ಸಂಖ್ಯೆಯ ಧ್ವಜಗಳು ಮಾರಾಟವಾಗುವ ವಿಶ್ವಾಸ ಖಾದಿ ಘಟಕದಲ್ಲಿ ಹಬ್ಬಿತ್ತು. ಆದರೆ ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ತಿದ್ದುಪಡಿಯನ್ನು ತಂದಿದ್ದು, ಪಾಲಿಸ್ಟರ್‌ನಿಂದ ಮಾಡಿದ ಧ್ವಜಗಳನ್ನು ಹಾರಿಸಲು ಅವಕಾಶ ಮಾಡಿಕೊಟ್ಟಿದ್ದು, ಇದು ಖಾದಿ ಧ್ವಜ ತಯಾರಿಕರಿಗೆ ನಷ್ಟದ ಭೀತಿ ಎದುರಾಗುವಂತೆ ಮಾಡಿದೆ.

ಈ ವರ್ಷ ಧ್ವಜ ಆರ್ಡರ್‌ಗಳು ಹೆಚ್ಚಾಗುವ ನಿರೀಕ್ಷೆಯಲ್ಲಿರುವಾಗಲೇ ಹುಬ್ಬಳ್ಳಿಯ ಖಂಡಿ ರಾಷ್ಟ್ರೀಯ ಧ್ವಜ ತಯಾರಿಕಾ ಘಟಕಕ್ಕೆ ಈ ಆದೇಶ ಬಂದಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆರ್ಡರ್‌ಗಳು ಕಡಿಮೆಯಾಗಿದೆ. ಜುಲೈ 2021 ರಲ್ಲಿ, ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಏಕೈಕ BIS ಪ್ರಮಾಣೀಕೃತ ಖಾದಿ ರಾಷ್ಟ್ರಧ್ವಜ ತಯಾರಿಕೆ ಘಟಕವು ವಿವಿಧ ಗಾತ್ರದ ರಾಷ್ಟ್ರಧ್ವಜಗಳ ಸುಮಾರು 90 ಲಕ್ಷ ಆರ್ಡರ್‌ಗಳನ್ನು ಸ್ವೀಕರಿಸಿದೆ.

ಈ ವರ್ಷ, ಪ್ರಸ್ತುತ ಆರ್ಡರ್‌ಗಳು ಕೇವಲ 14 ಲಕ್ಷದ ಆಸುಪಾಸಿನಲ್ಲಿವೆ. ಕೇಂದ್ರ ಸಚಿವಾಲಯದ ಕ್ರಮವು ಖಾದಿ ಧ್ವಜಗಳ ಸಾಮಾನ್ಯ ವ್ಯಾಪಾರಕ್ಕೂ ಹೊಡೆತ ನೀಡಿದೆ. ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಇದೀಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರಗಳನ್ನು ಕಳುಹಿಸಿದ್ದು, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿತ್ತು.

ಈ ವೇಳೆ ಸಚಿವ ಜೋಶಿ ಅವರು ಕೇಂದ್ರ ಸಚಿವಾಲಯದೊಂದಿಗೆ ಈ ವಿಷಯವನ್ನು ಚರ್ಚಿಸುವುದಾಗಿ ಸಂಘಕ್ಕೆ ಭರವಸೆ ನೀಡಿದ್ದರು. ಆದರೆ ಈ ವರೆಗೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಸಂಘದ ಹೊರತಾಗಿ, ಕರ್ನಾಟಕದಾದ್ಯಂತ ಹಲವಾರು ಖಾದಿ ಪ್ರಿಯ ಸಂಸ್ಥೆಗಳು ಮತ್ತು ವ್ಯಕ್ತಿಗಳು ಆಚರಣೆಯಲ್ಲಿ ಹೆಚ್ಚಿನ ಖಾದಿ ಧ್ವಜಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪತ್ರಗಳನ್ನು ಬರೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮವು ಭಾರತದಲ್ಲಿನ 26 ಕೋಟಿ ನಿವಾಸಗಳು, ಸರ್ಕಾರಿ ಕಛೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಒಂದು ವಾರದ ಆಚರಣೆಗಳಿಗಾಗಿ ತ್ರಿವರ್ಣವನ್ನು ಹೊಂದುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.

SCROLL FOR NEXT