ರಾಜ್ಯ

ದುರ್ವಾಸನೆ, ನೊಣಗಳ ಸಮಸ್ಯೆ: ಬಿಬಿಎಂಪಿ ತ್ಯಾಜ್ಯ ಘಟಕದ ಬಗ್ಗೆ ಬನಶಂಕರಿ 6ನೇ ಹಂತದ ನಿವಾಸಿಗಳಿಂದ ದೂರಿನ ಸರಮಾಲೆ

Sumana Upadhyaya

ಬೆಂಗಳೂರು: ನಗರದ ಬನಶಂಕರಿ 6ನೇ ಹಂತದ ಹೆಮ್ಮಿಗೆಪುರ ವಾರ್ಡ್‌ನ ಲಿಂಗಧೀರನಹಳ್ಳಿಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಮುಚ್ಚುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಕಚೇರಿಗೆ ಮುತ್ತಿಗೆ ಹಾಕಲು ಇಲ್ಲಿನ ನಿವಾಸಿಗಳು ನಿರ್ಧರಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಇಲ್ಲಿನ 150 ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಪುನರಾರಂಭಿಸಲಾಯಿತು. ಬಿಬಿಎಂಪಿಯು ಸಂಸ್ಕರಣೆಗೆ ಟನ್‌ಗಳಷ್ಟು ತ್ಯಾಜ್ಯವನ್ನು ಕಳುಹಿಸಲು ಪ್ರಾರಂಭಿಸಿತು. 

ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ವಿಪರೀತ ವಾಸನೆ ಬರುತ್ತಿದೆ.  ಮನೆ ಸುತ್ತಮುತ್ತ, ಅಡುಗೆ ಮನೆಯೊಳಗೆ, ಡೈನಿಂಗ್ ಟೇಬಲ್ ಮೇಲೆ ನೊಣಗಳು ಓಡಾಡುತ್ತವೆ. ನೊಣಗಳು ಬಂದು ನಾವು ತಿನ್ನುವ ಆಹಾರದ ಮೇಲೆ ಕುಳಿತುಕೊಳ್ಳುತ್ತವೆ. ನಮ್ಮ ಮನೆಯಲ್ಲಿ ಮಕ್ಕಳು ಮತ್ತು ವೃದ್ಧರಿದ್ದಾರೆ, ದಿನನಿತ್ಯ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ. 

ಕಳೆದ ವಾರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷೆ ಶಾಂತಾ ತಿಮ್ಮಯ್ಯ ಅವರನ್ನು ಭೇಟಿ ಮಾಡಿ ಇಲ್ಲಿನ ನಿವಾಸಿಗಳು ದೂರು ಸಲ್ಲಿಸಿದ್ದರು. ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರ್ವಾಸನೆ ನಿಯಂತ್ರಣ ಸೇರಿದಂತೆ 29 ಷರತ್ತುಗಳನ್ನು ಪಾಲಿಸುವಂತೆ ಬಿಬಿಎಂಪಿಗೆ ತಿಳಿಸಿದ್ದರೂ ಅದು ಪಾಲನೆಯಾಗುತ್ತಿಲ್ಲ ಎನ್ನುತ್ತಾರೆ.

ಈ ವಾರ್ಡ್ ನಲ್ಲಿ ಸುಮಾರು 4 ಸಾವಿರ ಮನೆಗಳಿದ್ದು, ಎಲ್ಲರ ಮೇಲೆಯೂ ತ್ಯಾಜ್ಯ ಸಂಸ್ಕರಣ ಘಟಕ ದುಷ್ಪರಿಣಾಮ ಬೀರುತ್ತಿದೆ. ಇನ್ನು 15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಬಿಎಸ್‌ಕೆ 6ನೇ ಹಂತದ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎಸ್.ಮಹೇಶ ಎಚ್ಚರಿಕೆ ನೀಡಿದ್ದಾರೆ. 

ನಿನ್ನೆ ಘಟಕದ ಬಳಿ ಜಮಾಯಿಸಿದ ನಿವಾಸಿಗಳು ಬಿಬಿಎಂಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಬಗ್ಗೆ ಪ್ರತಿಕ್ರಿಯೆ ಕೇಳೋಣವೆಂದರೆ ಶಾಂತಾ ತಿಮ್ಮಯ್ಯ ಸಂಪರ್ಕಕ್ಕೆ ಸಿಗಲಿಲ್ಲ. 

ಬಿಬಿಎಂಪಿ ಹೇಳುವುದೇನು?: ಕಳೆದ ಮೂರು ವರ್ಷಗಳಿಂದ ಮುಚ್ಚಿದ್ದ ತ್ಯಾಜ್ಯ ಸಂಸ್ಕರಣಾ ಘಟಕ ಸುಪ್ರೀಂ ಕೋರ್ಟ್ ನಿಂದ ಒಪ್ಪಿಗೆ ಪಡೆದ ನಂತರ ಪುನರಾರಂಭವಾಗಿದೆ. ನಿವಾಸಿಗಳು ಹೇಳುವಂತೆ ಕೆಟ್ಟ ವಾಸನೆ ಬರುವುದಾಗಲಿ, ನೊಣ ಹಾರುವ ಸಮಸ್ಯೆಯಿಲ್ಲ. ಘಟಕ ಇರುವುದರಿಂದ ರಿಯಲ್ ಎಸ್ಟೇಟ್ ಮಾರುಕಟ್ಟೆ ಮೌಲ್ಯ ಕುಸಿಯಬಹುದು ಎಂಬ ಭಯ ಇಲ್ಲಿನ ನಿವಾಸಿಗಳದ್ದಾಗಿದೆ. ಈ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರುತ್ತದೆ ಎಂದು ಬಿಬಿಎಂಪಿಯ ಎಸ್‌ಡಬ್ಲ್ಯೂಎಂ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT