ರಾಜ್ಯ

ಉಪನಗರ ರೈಲು, ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆಯಿಂದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ: ಸಿಎಂ ಬೊಮ್ಮಾಯಿ ವಿಶ್ವಾಸ

Manjula VN

ಬೆಂಗಳೂರು: ರೂ.15 ಸಾವಿರ ಕೋಟಿ ವೆಚ್ಚದ ಉಪನಗರ ರೈಲು ಹಾಗೂ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆಗೆ ಇದೇ 20 ರಂದು ಪ್ರಧಾನಮಂದ್ರಿ ನರೇಂದ್ರ ಮೋದಿಯವರು ಅಡಿಗಲ್ಲು ಹಾಕಲಿದ್ದು, ಈ ಎರಡು ಯೋಜನೆಗಳು ಪೂರ್ಣಗೊಂಡರೆ ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಯೋಜನೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಮುಂದಿನ ವಾರ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ರೂ.15 ಸಾವಿರ ಕೋಟಿ ವೆಚ್ಚದ ಉಪನಗರ ರೈಲು ಹಾಗೂ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ಹೇಳಿದರು.

ನಮ್ಮ ಸರ್ಕಾರ ಆರೋಗ್ಯ ಮೂಲಸೌಕರ್ಯ, ಶಿಕ್ಷಣ ಮತ್ತು ಬೆಂಗಳೂರು ನಗರದ ಸೌಂದರ್ಯೀಕರಣಕ್ಕೆ ಹೆಚ್ಚಿನ ಗಮನ ನೀಡುತ್ತಿದೆ. ನಗರದ ರಸ್ತೆಗಳಿಗೆ ಪ್ರತಿನಿತ್ಯ ಸುಮಾರು 500 ಹೊಸ ವಾಹನಗಳು ಸೇರ್ಪಡೆಗೊಳ್ಳುತ್ತಿವೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ನಗರಕ್ಕೆ ಉತ್ತಮ ಸಂಪರ್ಕದ ಅಗತ್ಯವಿದ್ದು, ನಮ್ಮ ಸರ್ಕಾರ ರೂ.15 ಸಾವಿರ ಕೋಟಿಗಳ ಉಪನಗರ ರೈಲು ಯೋಜನೆಗೆ ಅನುಮತಿ ನೀಡಿದೆ. ಮುಂದಿನ ವಾರ ಈ ಯೋಜನೆಗೆ ಪ್ರಧಾನಿ ಮೋದಿಯವರು ಅಡಿಗಲ್ಲು ಹಾಕಲಿದ್ದಾರೆಂದು ತಿಳಿಸಿದರು.

ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸರಕಾರ ಬದ್ಧವಾಗಿದ್ದು, ಶೀಘ್ರವೇ ಟೆಂಡರ್‌ ಕರೆಯಲಾಗುವುದು ಎಂದರು. ಇದೇ ವೇಳೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅನುಷ್ಠಾನಗೊಳಿಸಿರುವ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.

ಇದೇ ವೇಳೆ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ ಮುಂಭಾಗ ನಡೆಯುತ್ತಿರುವ ಜಲಮಾರ್ಗ ನಿರ್ಮಾಣ ಕಾಮಗಾರಿಯನ್ನೂ ಮುಖ್ಯಮಂತ್ರಿಗಳು ನಿನ್ನೆ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು. ಎನ್.ಆರ್.ರಸ್ತೆಯಿಂದ ಬೆಳ್ಳಂದೂರು ಕೆರೆವರೆಗೆ 9.60 ಕಿಮೀ ರಾಜಕಾಲುವೆಯನ್ನು ರೂ.169 ಕೋಟಿ ವೆಚ್ಚದಲ್ಲಿ ಜಲ ಮಾರ್ಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಶೇ.60ಕ್ಕೂ ಅಧಿಕ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿಯಿರುವ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸಿ ಶೀಘ್ರ ಲೋಕಾರ್ಪಣೆ ಮಾಡಲಾಗುತ್ತದೆ, ಕಾಮಗಾರಿಗೆ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಲೇ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ನಾಗರಿಕ ಜಲಮಾರ್ಗದಲ್ಲಿ ಜನರು ಕುಳಿತುಕೊಳ್ಳಲು, ವಾಯುವಿಹಾರ ಮಾಡುವುದು ಸೇರಿದಂತೆ ಸಂಚಾರಕ್ಕೆ ಕಿರು ಸೇತುವೆ ಹಾಗೂ ಸುತ್ತಲಿನ ಸ್ಥಳಗಳ ಅಭಿವೃದ್ಧಿ ಮಾಡಲಾಗುತ್ತದೆಯ ಯೋಜನೆಯಿಂದ ಕೆ.ಆರ್.ಮಾರುಕಟ್ಟೆ, ಸುಧಾಮನಗರ, ಕೆ.ಹೆಚ್.ರಸ್ತೆ, ಜೆ.ಕೆ.ಪುರ, ಎಲ್.ಆರ್.ನಗರ, ಕೋರಮಂಗಲ ಮತ್ತು ಎಸ್'ಟಿ.ಬೆಡ್ ಪ್ರದೇಶಗಳ ನಿವಾಸಿಗಳಿಗೆ ಉತ್ತಮ ಪರಿಸರ, ಆಸ್ತಿಗೆ ಮೌಲ್ಯವೃದ್ಧಿ ಮಾಡಿದಂತಾಗುತ್ತದೆ ಎಂದು ತಿಳಿಸಿದರು.

SCROLL FOR NEXT