ರಾಜ್ಯ

ಮುರುಘಾ ಶ್ರೀ ಪ್ರಕರಣ: ಮಠದ ಕಾರ್ಯವೈಖರಿ ಕುರಿತು ಮಾಹಿತಿ ಸಂಗ್ರಹಿಸಿದ ಜಿಲ್ಲಾಧಿಕಾರಿ

Manjula VN

ಚಿತ್ರದುರ್ಗ: ಮುರುಘಾ ಮಠದ ಆಡಳಿತ, ಎಸ್‌ಜೆಎಂ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಕುರಿತು ರಾಜ್ಯ ಸರ್ಕಾರ ಕೋರಿರುವ ಅಗತ್ಯ ಮಾಹಿತಿ ಸಂಗ್ರಹಿಸಿರುವುದಾಗಿ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಜಿಆರ್‌ಜೆ ಅವರು ಮಾಹಿತಿ ನೀಡಿದ್ದಾರೆ.

ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದ​ ಹಿನ್ನೆಲೆ ಏಕಾಂತಯ್ಯ ನೇತೃತ್ವದ ನಿಯೋಗ ಪೀಠತ್ಯಾಗಕ್ಕೆ ಆಗ್ರಹಿಸಿದೆ. ಈ ಬಗ್ಗೆ ಮುಖ್ಯಮಂತ್ರಿಯವರನ್ನು ಭೇಟಿಯಾದ ನಿಯೋಗವು ಸರ್ಕಾರವು ಮಧ್ಯಪ್ರವೇಶಿಸಿ ಮುರುಘಾ ಶ್ರೀಗಳನ್ನು ಪೀಠಾಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಮತ್ತು ಹೊಸ ಪೀಠಾಧ್ಯಕ್ಷರನ್ನು ನೇಮಕ ಮಾಡುವಂತೆ ಒತ್ತಾಯಿಸಿತ್ತು.

ಇನ್ನೊಂದೆಡೆ ಮಠದ ಎಸ್​ಜೆಎಂ ವಿದ್ಯಾಸಂಸ್ಥೆಗಳ ಸಿಬ್ಬಂದಿಗೆ ವೇತನ ವಿಳಂಬದ ಬಗ್ಗೆಯೂ ದೂರು ನೀಡಲಾಗಿತ್ತು. ಈ ಎಲ್ಲವನ್ನು ಗಮನಿಸಿದ ಸರ್ಕಾರ ಮಠ ಹಾಗೂ ವಿದ್ಯಾಸಂಸ್ಥೆ ಕಾರ್ಯವೈಖರಿ ಬಗ್ಗೆ ವರದಿ ಕೇಳಿತ್ತು.

ಸರ್ಕಾರದ ಸೂಚನೆಯಂತೆ ನಿನ್ನೆ (ನ.6) ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರು ಮಠಕ್ಕೆ ಭೇಟಿ ನೀಡಿ ಮಠ ಹಾಗೂ ವಿದ್ಯಾಪೀಠದ ಆಡಳಿತ ಕಾರ್ಯ ವೈಖರಿ ಪರಿಶೀಲನೆ ನಡೆಸಿದರು.

ಎಸ್‌ಜೆಎಂ ವಿದ್ಯಾಪೀಠದ ಆಡಳಿತಾತ್ಮಕ ವಿಷಯಗಳು ಮತ್ತು ಚಿನ್ಮೂಲದ್ರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಟ್ರಸ್ಟ್‌ನ ಬಗ್ಗೆ ವರದಿ ಸಿದ್ಧಪಡಿಸುವಂತೆ ಕಂದಾಯ ಇಲಾಖೆ ಸೂಚಿಸಿತ್ತು. ಇದರಂತೆ ವರದಿ ಸಿದ್ಧಪಡಿಸಲಾಗಿದೆ. ಚಂದ್ರವಳ್ಳಿಯಲ್ಲಿರುವ ಎಸ್‌ಜೆಎಂ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವೇತನ ವಿತರಣೆ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗುತ್ತದೆ ಎಂದು ದಿವ್ಯಾ ಪ್ರಭು ಅವರು ಮಾಹಿತಿ ನೀಡಿದರು.

SCROLL FOR NEXT