ರಾಜ್ಯ

ಸಿದ್ದರಾಮಯ್ಯ ಬಗ್ಗೆ ಆಕ್ಷೇಪಾರ್ಹ ಪಿಸುಮಾತು: ಮುಕುಡಪ್ಪ ಮನೆಗೆ ಅಭಿಮಾನಿಗಳ ಮುತ್ತಿಗೆ, ಕ್ಷಮೆ ಕೇಳಿದ ಕುರುಬ ನಾಯಕ

Srinivasamurthy VN

ಬೆಂಗಳೂರು: ಸಿದ್ದರಾಮಯ್ಯ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕುರುಬ ಸಮುದಾಯದ ಮುಖಂಡ ಮುಕುಡಪ್ಪ ಕ್ಷಮೆ ಕೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಕುಡಪ್ಪ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೇಳಿದರು.  ಟಗರು ಪದದ ಚರ್ಚೆ ವೇಳೆ ಅಶ್ಲೀಲ ಮಾತು ಆಡಿದ್ದು ನಿಜ. ಆದರೆ, ಅದು ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಲ್ಲ ಎಂದು ಹೇಳಿದರು. ಕುರುಬರ ಮಠ ನಿರ್ಮಾಣದಲ್ಲಿ ಸಿದ್ದರಾಮಯ್ಯ ಕೊಡುಗೆ ದೊಡ್ಡದು ಅಂತ ಮುಕುಡಪ್ಪ ಗುಣಗಾನ ಮಾಡಿದ್ದಾರೆ.

ನಾನು ಮತ್ತು ಪುಟ್ಟಸ್ವಾಮಿ ಕುರಿ ಹಾಗೂ ಟಗರು ಬಗ್ಗೆ ಮಾತನಾಡುತ್ತಿದ್ದೆವು. ಬೊಮ್ಮಾಯಿ 20 ಕುರಿ ಹಾಗೂ ಒಂದು ಟಗರು ನೀಡುವ ಯೋಜನೆ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಆ ವೇಳೆ ಒಂದೇ ಟಗರು 20 ಕುರಿಗಳನ್ನು ನೋಡಿಕೊಳ್ಳುತ್ತದೆ ಎಂದಿದ್ದು ನಿಜ. ಆದರೆ ಸಿದ್ದರಾಮಯ್ಯ ಬಗ್ಗೆ ಆ ಪದ ಹೇಳಿದ್ದೇನೆ ಎಂದು ಬಿಂಬಿತವಾಗಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಕುರುಬರ ಸಂಘ ಹಾಗೂ ಮಠ ಕಟ್ಟಿದ್ದಾರೆ. ಕುರುಬ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ನಾನೂ ಆ ಸಂದರ್ಭದಲ್ಲಿ ಅವರ ಜೊತೆ ಇದ್ದೆ ಎಂದು ಹೇಳಿದ್ದಾರೆ.

ಮುತ್ತಿಗೆ ಹಾಕಿದ್ದ ಸಿದ್ದು ಅಭಿಮಾನಿಗಳು
ಇದಕ್ಕೂ ಮುನ್ನ, ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ ಬಗ್ಗೆ ಅವಹೇಳಕಾರಿ, ಕೀಳುಮಟ್ಟದ ಪದ ಬಳಕೆ ಮಾಡಿದ ಮುಕಡಪ್ಪ ಮತ್ತು ಪುಟ್ಟಸ್ವಾಮಿ ವಿರುದ್ಧ ಮುಕುಡಪ್ಪರವರ ನಿವಾಸ ಎದುರು ಕುರುಬ ಸಮಾಜದ ಮುಖಂಡರು, ಸಿದ್ದರಾಮಯ್ಯರವರ ಅಭಿಮಾನಿಗಳು ಪ್ರತಿಭಟನೆ ಮಾಡಿದರು. ಬೆಂಗಳೂರಿನ ವಿಜಯನಗರದಲ್ಲಿರುವ ಕೆ. ಮುಕುಡಪ್ಪ ಮನೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಮುಕುಡಪ್ಪ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.
 

SCROLL FOR NEXT