ರಾಜ್ಯ

ಉದ್ಯೋಗ ಅರಸಿ ಮಕ್ಕಳು, ಮೊಮ್ಮಕ್ಕಳು ನಗರಗಳಿಗೆ ವಲಸೆ; ಗದಗದ 20 ಕುಗ್ರಾಮಗಳಲ್ಲಿ ವೃದ್ಧರು ಮಾತ್ರ ವಾಸ!

Manjula VN

ಗದಗ: ಗದಗ ಜಿಲ್ಲೆಯ 20ಕ್ಕೂ ಹೆಚ್ಚು ಕುಗ್ರಾಮಗಳು ವಲಸೆ ಸಂಕಷ್ಟ ಎದುರಿಸುತ್ತಿವೆ. ಕುಗ್ರಾಮಗಳಲ್ಲಿನ ಬಹುಸಂಖ್ಯೆಯ ಜನರು ಉದ್ಯೋಗ ಹರಸಿ ನಗರಕ್ಕೆ ವಲಸೆ ಹೋಗುತ್ತಿದ್ದು, ಇದೀಗ ಗ್ರಾಮಗಳಲ್ಲಿ ವೃದ್ಧರು ಮಾತ್ರ ವಾಸ ಮಾಡುತ್ತಿರುವುದು ಕಂಡು ಬರುತ್ತಿದೆ.

ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿಯೂ ಉದ್ಯೋಗಾವಕಾಶಗಳು ಇಲ್ಲದ ಕಾರಣ ಶಿರಹಟ್ಟಿ, ಮುಂಡರಗಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಪುರುಷರು ಹಾಗೂ ಮಹಿಳೆಯರು ನಗರಗಳತ್ತ ಮುಖ ಮಾಡುತ್ತಿರುವುದು ಹೆಚ್ಚಾಗುತ್ತಿದೆ.

ಈ ಹಿಂದೆ ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಜನರಿಗೆ ಉದ್ಯೋಗ ದೊರಕುತ್ತಿತ್ತು. ಆದರೆ, ಇದೀಗ ಗ್ರಾಮ ಪಂಚಾಯತಿಗಳು (ಜಿಪಿ) ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಕೆಲಸ ನೀಡುತ್ತಿದೆ. ಅದರಲ್ಲಿಯೂ ವೇತನ ಜಮಾ ಮಾಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಕೆಲವರು ಮಕ್ಕಳೊಂದಿಗೆ ಗ್ರಾಮಗಳ ತೊರೆಯುತ್ತಿದ್ದು, ಇನ್ನೂ ಕೆಲವರು ಮಕ್ಕಳನ್ನು ಹಾಸ್ಟೆಲ್ ಗಳಿಗೆ ಸೇರಿಸಿದ್ದಾರೆ. ಸೂರಣಗಿ, ಅಡರಕಟ್ಟಿ, ಅಡ್ರಹಳ್ಳಿ, ಕುಂದ್ರಳ್ಳಿ, ಕೊಂಡಿಕೊಪ್ಪ, ನೆಲುಗಲ್, ದೊಡ್ಡೂರು, ಉಂಡೇನಹಳ್ಳಿ, ಅಕ್ಕಿಗುಂದ, ಶೆಟ್ಟಿಕೆರೆ, ಬೂದಿಹಾಳ್ ಮತ್ತಿತರ ಕುಗ್ರಾಮಗಳ ಜನರು ಗೋವಾ, ಮಂಗಳೂರು, ಚಿಕ್ಕಮಗಳೂರು, ಬೆಂಗಳೂರಿನತ್ತ ವಲಸೆ ಹೋಗುತ್ತಿರುವುದು ಕಂಡು ಬಂದಿದೆ.

ಗ್ರಾಮದಲ್ಲಿನ ಜನರು ವಲಸೆ ಹೋಗುತ್ತಿರುವ ಹಿನ್ನೆಲೆಯಲ್ಲಿ ವಯೋವೃದ್ದರು ಚಿಂತೆಯಲ್ಲಿ ಮುಳುಗಿದ್ದಾರೆ. ಆರೋಗ್ಯ ಏರುಪೇರಾದರೆ, ಸ್ವತಃ ಆಸ್ಪತ್ರೆಗೆ ಧಾವಿಸಲು ಸಾಧ್ಯವಾಗದಿರುವುದು ಹಾಗೂ ತುರ್ತು ಸಂದರ್ಭಗಳಲ್ಲಿ ತಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಚಿಂತಾಕ್ರಾಂತರಾಗಿದ್ದಾರೆ.

ಕೇರಳಕ್ಕೆ ತೆರಳುತ್ತಿದ್ದ ದೊಡ್ಡೂರಿನ ಕುಗ್ರಾಮದ ವ್ಯಕ್ತಿಯೊಬ್ಬರು ಮಾತನಾಡಿ, ‘ಅತಿವೃಷ್ಟಿಯಿಂದ ಕೃಷಿ ಬೆಳೆ ನಾಶಗೊಂಡಿದೆ. ಮನ್ರೇಗಾ ಕೆಲಸವನ್ನು ಕೂಡ ನಿರ್ಬಂಧಿಸಲಾಗಿದೆ. ಗ್ರಾಮದಲ್ಲಿ ಸುಮ್ಮನೆ ಕುಳಿತುಕೊಳ್ಳಬೇಕಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ. ಹೀಗಾಗಿ ಉದ್ಯೋಗಕ್ಕಾಗಿ ಇತರೆ ನಗರಗಳಿಗೆ ಹೋಗುತ್ತಿದ್ದೇವೆ. ಅಲ್ಲಿ ನಾವು ದಿನಕ್ಕೆ ಕನಿಷ್ಟವೆಂದರೂ ರೂ.400-500 ಗಳಿಸಬಹುದು ಎಂದು ಹೇಳಿದ್ದಾರೆ.

ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾತನಾಡಿ, ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಎಲ್ಲಾ ಜಿಲ್ಲಾ ಪಂಚಾಯಿತಿಗಳಿಂದ ವರದಿಗಳನ್ನು ಕೇಳುತ್ತೇವೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

SCROLL FOR NEXT