ರಾಜ್ಯ

ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಇಟ್ಟು ಫೋಟೋಗೆ ಪೋಸ್; ಸಚಿವ ಅಶೋಕ್ ನಡೆಗೆ ತೀವ್ರ ಖಂಡನೆ 

Srinivas Rao BV

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆಯ ಉದ್ಘಾಟನೆ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಫೋಟೋಗೆ ಪೋಸ್ ನೀಡುವಾಗ ಸಚಿವ ಅಶೋಕ್ ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳ ಹೆಗಲ ಮೇಲೆ ಕೈ ಇಟ್ಟಿದ್ದು ಈಗ ವಿವಾದಕ್ಕೆ ಗುರಿಯಾಗಿದೆ.

ಸಚಿವ ಆರ್ ಅಶೋಕ್ ನಿರ್ಮಲಾನಂದನಾಥ ಶ್ರೀಗಳ ಹೆಗಲ ಮೇಲೆ ಕೈಯ್ಯಿಟ್ಟಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. 

ಸ್ವಾಮೀಜಿಗಳಿಗೆ ಅವರದ್ದೇ ಆದ ಗೌರವ ಇರುತ್ತದೆ. ಆದರೆ, ಅಶೋಕ್‌ ಸ್ವಾಮೀಜಿಗಳ ಹೆಗಲ ಮೇಲೆ ಕೈಇಟ್ಟುಕೊಂಡು ಫೋಟೋಗೆ ಪೋಸ್ ನೀಡಿ ನಿಂತಿರುವುದು ಶ್ರೀಗಳಿಗೆ ಮಾಡಿದ ಅವಮಾನ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಈ ಫೋಟೋವನ್ನು ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಗುರಿಯಾಗಿಸಿಕೊಂಡಿದ್ದು, ಬಿಜೆಪಿ ನಾಯಕರೇ ಸ್ವಾಮೀಜಿಗಳಿಗೆ ನೀವು ನೀಡುವ ಗೌರವ ಇದೇನಾ? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್, ಸಚಿವ ಆರ್‌ ಅಶೋಕ್‌ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಆರ್‌ ಅಶೋಕ್‌ ಅವರಿಗೆ ಸದರ ಎನಿಸಿದ್ದಾರೆಯೇ? ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ? ಧರ್ಮ, ಸಂಸ್ಕೃತಿಯ ಬಗ್ಗೆ ಮಾತಾಡುವ ಬಿಜೆಪಿಯ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

SCROLL FOR NEXT