ರಾಜ್ಯ

ನಾಗರಹೊಳೆಯಲ್ಲಿ ಕಾಣೆಯಾಗಿದ್ದ 3 ಹುಲಿ ಮರಿಗಳು ಪತ್ತೆ: ಟ್ರ್ಯಾಪಿಂಗ್ ಕ್ಯಾಮರಾದಲ್ಲಿ ದೃಶ್ಯ ಸೆರೆ

Manjula VN

ಮೈಸೂರು: ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟ ಹೆಣ್ಣು ಹುಲಿಯ ಮೂರು ಮರಿಗಳ ದೃಶ್ಯ ಟ್ರ್ಯಾಪಿಂಗ್ ಕ್ಯಾಮರಾದಲ್ಲಿ ಸೆರೆಯಾಗಿವೆ.

ನಾಗರಹೊಳೆ ಹುಲಿ ರಕ್ಷಿತಾರಣ್ಯ ಡಿಸಿಎಫ್ ಮತ್ತು ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ಅವರು ಮಾತನಾಡಿ, ಅಂತರಸಂತೆ ಅರಣ್ಯ ವ್ಯಾಪ್ತಿಗೆ 300 ಮೀಟರ್ ದೂರದಲ್ಲಿರುವ ಕೃಷಿ ಭೂಮಿಯಲ್ಲಿ ಉರುಳಿಗೆ ಸಿಲುಕಿ ತಾಯಿ ಹುಲಿ ಸಾವನ್ನಪ್ಪಿತ್ತು. ತಾಯಿ ಹುಲಿ ಜೊತೆಗೆ ಮೂರು ಹುಲಿಗಳಿದ್ದದ್ದು ತಿಳಿದುಬಂದ ಹಿನ್ನೆಲೆಯಲ್ಲಿ ಹುಲಿ ಮರಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಸುಮಾರು 130 ಅರಣ್ಯ ಸಿಬ್ಬಂದಿ ಮತ್ತು ಅಭಿಮನ್ಯು ಮತ್ತು ಭೀಮ ಸೇರಿದಂತೆ ನಾಲ್ಕು ಶಿಬಿರದ ಆನೆಗಳು ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.

ಅರಣ್ಯಾಧಿಕಾರಿಗಳು 30 ಕ್ಯಾಮೆರಾ ಟ್ರ್ಯಾಪ್‌ಗಳನ್ನು ಹಾಕಿದ್ದರು ಮತ್ತು ಮರಿಗಳನ್ನು ಪತ್ತೆಹಚ್ಚಲು ಎರಡು ಡ್ರೋನ್ ಕ್ಯಾಮೆರಾಗಳನ್ನೂ ಬಳಸಲಾಗಿತ್ತು. ನವೆಂಬರ್ 15 ರಂದು ಜಿಂಕೆಯ ಅರ್ಧ ತಿಂದ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಂಕೆಯ ಮೃತದೇಹದ ಸುತ್ತಲೂ ಕ್ಯಾಮೆರಾಗಳನ್ನು ಹಾಕಲಾಗಿತ್ತು.

ನವೆಂಬರ್ 16 ರಂದು ಅರಣ್ಯಾಧಿಕಾರಿಗಳು ಟ್ರ್ಯಾಪ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾದ ಫೋಟೋಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ಮೆಮೊರಿ ಕಾರ್ಡ್ ತೆಗೆದು ನೋಡಿದಾಗ, ಮೂರು ಮರಿಗಳು ಜಿಂಕೆಯ ಮೃತದೇಹವನ್ನು ತಿನ್ನುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.

SCROLL FOR NEXT