ರಾಜ್ಯ

30 ಕೋಟಿ ರೂ. ಮೌಲ್ಯದ ಭೂಮಿ ಬಿಡಿಎ ವಶಕ್ಕೆ

Manjula VN

ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ತೆರೆವು ಕಾರ್ಯಾಚರಣೆ ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಂಗಳವಾರ ಬೆಳಿಗ್ಗೆ 30 ಕೋಟಿ ರೂ. ಮೌಲ್ಯದ 22 ಗುಂಟೆ ಜಾಗವನ್ನು ತನ್ನ ವಶಕ್ಕೆ ಪಡೆದಿದೆ.

ಬಿಡಿಎಗೆ ಸೇರಿದ್ದ ಜೆಪಿ ನಗರ 9 ನೇ ಹಂತದ 1 ನೇ ಬ್ಲಾಕ್ ನಲ್ಲಿನ ಆಲಹಳ್ಳಿ ಸರ್ವೆ ಸಂಖ್ಯೆ 4/1 ರಲ್ಲಿ ಈ ಜಾಗವನ್ನು ಕೆಲವು ಅತಿಕ್ರಮಣದಾರರು ಕಳೆದ ಹತ್ತು ವರ್ಷಗಳಿಂದ ತಾತ್ಕಾಲಿಕ್ ಶೆಡ್‍ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.

ಬಿಡಿಎ ಆಯುಕ್ತರ ಆದೇಶದನ್ವಯ ಬಿಡಿಎ ಜಾಗೃತ ದಳದ ಪೊಲೀಸ್ ವರಿಷ್ಠ್ರಾಕಾರಿ ನಂಜುಂಡೇಗೌಡ ಮತ್ತು ಪೊಲೀಸ್ ಅಧಿಕಾರಿಗಳಾದ ರವಿಕುಮಾರ್ ಶ್ರೀನಿವಾಸ್ ಹಾಗೂ ಎಂಜಿನಿಯರ್ ಅಶೋಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಶೆಡ್‍ಗಳನ್ನು ತೆರವುಗೊಳಿಸಲಾಯಿತು. ಕಳೆದ ನಾಲ್ಕು ದಿನಗಳಲ್ಲಿ ಪ್ರಾಧಿಕಾರವು ಕೈಗೊಂಡ ಎರಡನೇ ದೊಡ್ಡ ಕಾರ್ಯಾಚರಣೆ ಇದಾಗಿದೆ.

ಒತ್ತುವರಿ ತೆರವು ಮಾಡುತ್ತಿದ್ದ ಅಧಿಕಾರಿಗಳಿಗೆ ಬಿಡಿಎಯ 30 ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರ ಹತ್ತು ಸಿಬ್ಬಂದಿಯ ತಂಡವು ರಕ್ಷಣೆ ನೀಡಿತ್ತು. ಬಿಡಿಎ ವತಿಯಿಂದ ಎರಡು ಮಣ್ಣು ತೆಗೆಯುವ ಯಂತ್ರಗಳನ್ನು ಬಳಸಲಾಗಿದೆ. ಇನ್ನೂ ಕೆಲವು ಕೆಲಸಗಳು ಬಾಕಿ ಉಳಿದಿದ್ದು, ಬುಧವಾರದೊಳಗೆ ಪೂರ್ಣಗೊಳಿಸಲಾಗುವುದು. ಬಿಡಿಎಗೆ ಸೇರಿದ ಭೂಮಿಗೆ ಬೇಲಿ ಹಾಕುವ ಕೆಲಸವನ್ನೂ ಮಾಡಲಾಗುತ್ತದೆ ಎಂದು ನಂಜುಂಡೇಗೌಡ ಅವರು ಹೇಳಿದ್ದಾರೆ.

ನವೆಂಬರ್ 19 ರಂದು ಜೆಪಿ ನಗರ 8ನೇ ಬ್ಲಾಕ್‌ನ ಕೊತ್ತನೂರು ಗ್ರಾಮದಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಮೂಲಕ ಬಿಡಿಎ 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿತ್ತು.

ಇನ್ನು ಶಿವರಾಮ ಕಾರಂತ ಬಡಾವಣೆಯಲ್ಲಿ 47 ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸಕ್ರಮಗೊಳಿಸಿದೆ.

ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಸಮಿತಿಯು ತನ್ನ 26 ನೇ ವರದಿಯಲ್ಲಿ ಮಾಡಿದ ಶಿಫಾರಸುಗಳ ಬೆಳಕಿನಲ್ಲಿ ಇದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಬಡಾವಣೆಯಲ್ಲಿ ಒಟ್ಟು 4,985 ಕಟ್ಟಡಗಳು ಸಕ್ರಮಗೊಂಡಿವೆ.

SCROLL FOR NEXT