ರಾಜ್ಯ

ಮಂಗಳೂರು ಸ್ಫೋಟ ಪ್ರಕರಣ: ವಾಟ್ಸ್‌ಆ್ಯಪ್‌ ಡಿಪಿಯಲ್ಲಿ ಶಿವನ ಫೋಟೋ ಹಾಕಿಕೊಂಡಿದ್ದ ಶಂಕಿತ ಆರೋಪಿ ಶಾರೀಕ್!

Manjula VN

ಮೈಸೂರು: ಮಂಗಳೂರು ಸ್ಫೋಟದ ಪ್ರಮುಖ ಶಂಕಿತ ಆರೋಪಿ ಮೊಹಮ್ಮದ್ ಶಾರಿಕ್ ತನ್ನ ವಾಟ್ಸ್‌ಆ್ಯಪ್‌ ಡಿಪಿಯಲ್ಲಿ ಇಶಾ ಫೌಂಡೇಶನ್‌ನವರ ಈಶ್ವರ ದೇವರ ಪ್ರತಿಮೆಯ ಚಿತ್ರವನ್ನು ಹಾಕಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ನಕಲಿ ಆಧಾರ್‌ ವಿಳಾಸವನ್ನು ನೀಡಿದ್ದ ಶಾರೀಕ್ ತನ್ನ ಬಗ್ಗೆ ಯಾರಿಗೂ ಅನುಮಾನ ಬಾರದೇ ಇರಲು ವಾಟ್ಸಾ ಆ್ಯಪ್‌ನಲ್ಲಿ ಹಿಂದೂ ದೇವರ ಚಿತ್ರವನ್ನು ಹಾಕಿಕೊಂಡಿದ್ದ. ತಮ್ಮ ಕೇಂದ್ರಕ್ಕೆ ತರಬೇತಿಗೆ ಬಂದವನು ಉಗ್ರ ಎಂಬ ವಿಚಾರ ತಿಳಿದ ಎಸ್‌ಎಂಎಂ ಇನ್‌ಸ್ಟಿಟ್ಯೂಟ್ ಆಫ್ ಸರ್ವೀಸಿಂಗ್ ಮಾಲೀಕ ಪ್ರಸಾದ್ ಅವರು ಇದೀಗ ಶಾಕ್'ಗೊಳಗಾಗಿದ್ದಾರೆ.

ಮೈಸೂರಿನ ಕೆ.ಆರ್.‌‌ ಮೊಹಲ್ಲಾದಲ್ಲಿರುವ ಎಸ್‌ಎಂಎಂ ಮೊಬೈಲ್ ರಿಪೇರಿ ತರಬೇತಿ ಕೇಂದ್ರದಲ್ಲಿ ಶಾರೀಕ್‌ ಮೊಬೈಲ್ ರಿಪೇರಿ ತರಬೇತಿ ಪಡೆಯುತ್ತಿದ್ದ. ನಾನು ಧಾರವಾಡ ಮೂಲದ ಪ್ರೇಮ್ ರಾಜ್ ಎಂದು ದಾಖಲೆ ನೀಡಿ ಪ್ರವೇಶ ಪಡೆದಿದ್ದ. ನನಗೆ ಮೈಸೂರಿನ ಕಾಲ್‌ ಸೆಂಟರ್‌ನಲ್ಲಿ ಉದ್ಯೋಗ ಸಿಕ್ಕಿದೆ. ಅಲ್ಲಿ ಸೇರಲು 20 ದಿನ ಸಮಯವಿದೆ. ಈ ಸಮಯದಲ್ಲಿ ಮೊಬೈಲ್‌ ತರಬೇತಿಗೆ ಸೇರಿದ್ದೇನೆ ಎಂದು ಹೇಳಿ ನಂಬಿಸಿದ್ದ ಎನ್ನಲಾಗಿದೆ.

ಸಂಸ್ಥೆಯ ಮುಖ್ಯಸ್ಥ ಪ್ರಸಾದ್ ಅವರು ಈ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ತರಗತಿ ವಿವರಗಳು ಮತ್ತು ಕೋರ್ಸ್‌ಗೆ ಸಂಬಂಧಿಸಿದ ವಿಷಯಗಳನ್ನು ವಾಟ್ಸಾಪ್ ಮೂಲಕ ನೀಡುತ್ತೇವೆ. ಶಾರೀಕ್‌ ತನ್ನ ವಾಟ್ಸಪ್‌ ಡಿಪಿಯಲ್ಲಿ ಈಶ್ವರನ ಫೋಟೋ ಹಾಕಿದ್ದ. ಧಾರವಾಡ ಶೈಲಿಯ ಕನ್ನಡವನ್ನೇ ಮಾತಾಡುತ್ತಿದ್ದ. ವೇಷ ಭೂಷಣವಾಗಲಿ, ಬಟ್ಟೆಯಾಗಲಿ ಯಾವುದರಲ್ಲೂ ಅವನು ಮುಸ್ಲಿಂ ವ್ಯಕ್ತಿ ಎಂಬ ಅನುಮಾನವೇ ಬಂದಿರಲಿಲ್ಲ, ತರಗತಿಗೆ ರೆಗ್ಯುಲರ್ ಆಗಿ ಬರುತ್ತಿರಲಿಲ್ಲ. ಇಲ್ಲಿಯವರೆಗೆ ಕೇವಲ 20 ತರಗತಿಗಳಿಗಷ್ಟೇ ಹಾಜರಾಗಿದ್ದಾನೆ ಎಂದು ಹೇಳಿದ್ದಾರೆ.

ಕೇರಳ ನೋಂದಾಯಿತ ಬೈಕ್‌ನ ಫೋಟೋವನ್ನು ಅವರ ಮೊಬೈಲ್ ಸ್ಕ್ರೀನ್‌ಸೇವರ್‌ನಲ್ಲಿತ್ತು. ಇದನ್ನು ಗಮನಿಸಿದ ನಾನು ಒಮ್ಮೆ ಪ್ರಶ್ನಿಸಿದ್ದೆ.  ಬೈಕ್ ಕೇರಳದ ತನ್ನ ಸ್ನೇಹಿತನಿಗೆ ಸೇರಿದ್ದು ಎಂದು ಹೇಳಿದ್ದ. ಏತನ್ಮಧ್ಯೆ, ತರಬೇತಿಯ ಭಾಗವಾಗಿ ಸಂಸ್ಥೆಗೆ ಸಾಮಾನ್ಯ ಪೂರೈಕೆದಾರರಿಂದ 10 ಮೊಬೈಲ್ ಫೋನ್‌ಗಳನ್ನು ಪಡೆಯುವ ಕಾರ್ಯವನ್ನು ಶಾರಿಕ್‌ಗೆ ನೀಡಿದ್ದೆ. ಶಾರಿಕ್ 'ಭಯೋತ್ಪಾದಕ ಕೃತ್ಯ'ದಲ್ಲಿ ಭಾಗಿಯಾಗಿರುತ್ತಾನೆಂದು ನಿರೀಕ್ಷಿಸಿರಲಿಲ್ಲ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಮೈಸೂರಿನ ಲೋಕನಾಯಕನಗರದಲ್ಲಿರುವ ಶಾರಿಕ್ ಅವರ ರೂಮಿನಿಂದ ಸಂಗ್ರಹಿಸಿದ ಸಾಕ್ಷ್ಯವನ್ನು ಮುಚ್ಚಿದ ಲಕೋಟೆಯಲ್ಲಿ ಮಂಗಳೂರಿಗೆ ಕಳುಹಿಸಲಾಗಿದೆ.

ಸಾಕ್ಷ್ಯಗಳಲ್ಲಿ ಮಲ್ಟಿಮೀಟರ್ ತಂತಿಗಳು, ಸಣ್ಣ ಬೋಲ್ಟ್‌ಗಳು, ಸರ್ಕ್ಯೂಟ್ ಬೋರ್ಡ್‌ಗಳು, ಬ್ಯಾಟರಿಗಳು, ಸಲ್ಫರ್, ರಂಜಕ, ಮರದ ಪುಡಿ ಮತ್ತು ಇತರ ವಸ್ತುಗಳಿದ್ದವು ಎಂದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT