ರಾಜ್ಯ

ಮಂಗಳೂರು ಸ್ಫೋಟ ಪ್ರಕರಣದಿಂದ ಎಚ್ಚೆತ್ತ ಆರ್‌ಡಬ್ಲ್ಯೂಎ: ನಿವಾಸಿಗಳ ಹಿನ್ನೆಲೆ ತಿಳಿದುಕೊಳ್ಳಲು ಮುಂದು!

Manjula VN

ಬೆಂಗಳೂರು: ಮಂಗಳೂರಿನಲ್ಲಿ ಬಾಂಬ್ ಸ್ಫೋಟದ ಬಳಿಕ ಎಚ್ಚೆತ್ತುಕೊಂಡಿರುವ ಬೆಂಗಳೂರಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸ್ಥಳೀಯರ, ವಿಶೇಷವಾಗಿ ಬಾಡಿಗೆದಾರರ ಹಿನ್ನೆಲೆ ಪರಿಶೀಲನೆ ನಡೆಸಲು ಕಠಿಣ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.

ಸ್ಫೋಟ ಘಟನೆ ಬಳಿಕ ಕೆಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಆರ್‌ಡಬ್ಲ್ಯೂಎ)ಗಳು ಮತ್ತು ಮನೆ ಮಾಲೀಕರು ತಾವು ಪೊಲೀಸರೊಂದಿಗೆ ನಿಯಮಿತ ಸಭೆಗಳನ್ನು ನಡೆಸುವುದಾಗಿ ಮತ್ತು ತಮ್ಮ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ಬೆಂಗಳೂರು ಈಶಾನ್ಯ ಮಹಾವೇದಿಕೆ ಅಧ್ಯಕ್ಷ ಎಸ್‌ ಮುರಳಿ ಮಾತನಾಡಿ, ‘ಅಪರಾಧಗಳು ಸಾಂದರ್ಭಿಕವಾಗಿ ನಡೆದರೂ ನಾವು ಜಾಗರೂಕರಾಗಿರಬೇಕು ಮತ್ತು ಪೊಲೀಸರೊಂದಿಗೆ ಆಗಾಗ್ಗೆ ಸಂವಹನ ನಡೆಸಬೇಕು’ ಎಂದು ಹೇಳಿದ್ದಾರೆ.

ಇತ್ತೀಚೆಗೆ ವ್ಯಕ್ತಿಯೊಬ್ಬರು ಬಾಡಿಗೆಗೆ ಮನೆ ಹುಡುಕಿಕೊಂಡು ಬಂದಿದ್ದ. ಎಷ್ಟು ಬಾಡಿಗೆಯಾದರೂ ನೀಡಲು ಸಿದ್ಧನಿದ್ದ, ಆದರೆ, ಮಂಗಳೂರು ಸ್ಫೋಟ ಘಟನೆ ನೆನೆದು ಬಾಡಿಗೆ ಮನೆ ನೀಡಲು ನಾನು ನಿರಾಕರಿಸಿದ್ದೆ ಎಂದು ಮಹದೇವಪುರ ಆರ್‌ಡಬ್ಲ್ಯುಎ ಪ್ರಧಾನ ಕಾರ್ಯದರ್ಶಿ ಕವಿತಾ ರಘುರಾಮ್ ಅವರು ಹೇಳಿದ್ದಾರೆ.

ನನ್ನ ಮನೆಯನ್ನು ಬಾಡಿಗೆಗೆ ನೀಡಲು ಒಪ್ಪಿದ ನಂತರ, ಬಾಡಿಗೆದಾರರ ಆಧಾರ್ ಕಾರ್ಡ್, ಫೋಟೋಗಳು ಮತ್ತು ಕೆಲಸದ ವಿಳಾಸಗಳ ಫೋಟೋಕಾಪಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಮುನ್ನೆಚ್ಚರಿಕೆಯಾಗಿ ಈ ವಿವರಗಳನ್ನು ಪುಸ್ತಕವೊಂದರಲ್ಲಿ ಇರಿಸಿದ್ದೇನೆಂದು ಎಂದು ಹಿರಿಯ ನಾಗರಿಕ ವೈ.ಗಫೂರ್ ಅವರು ತಿಳಿಸಿದ್ದಾರೆ.

ಸುರಕ್ಷತೆಯನ್ನು ಹೆಚ್ಚಿಸಲು, ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್‌ನ ವಿದ್ಯಾ ಗೊಗ್ಗಿ ಅವರು, ಮುಂಬೈನಲ್ಲಿ ಬಾಡಿಗೆದಾರರ ನೋಂದಣಿ ಮತ್ತು ಪೊಲೀಸ್ ಎನ್‌ಒಸಿಗಳನ್ನು ನೀಡುವ ವ್ಯವಸ್ಥೆಯಿರುವಂತೆ ನಗರದಲ್ಲೂ ಆ ವ್ಯವಸ್ಥೆಯನ್ನು ತರಬೇಕು ಎಂದು ಒತ್ತಾಯಿಸಿದರು.

“ಕೆಲವು ಮಾಲೀಕರು ಮಾಹಿತಿಯನ್ನು ಹಂಚಿಕೊಳ್ಳಲು ಅಥವಾ ಬಾಡಿಗೆದಾರರಿಂದ ಸಂಗ್ರಹಿಸಲು ಹಿಂಜರಿಯಬಹುದು. ಆದರೆ, ಇದು ನಿಯಮವಾಗಬೇಕು, ಇದರಿಂದ ಸಾಕಷ್ಟು ಗೊಂದಲಗಳನ್ನು ತಪ್ಪಿಸಬಹುದು ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು ಎಂದು ಗೊಗ್ಲಿ ಅವರು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು ಮತ್ತು ಮಾಲೀಕರ ಪಾತ್ರ ಮಹತ್ವದ್ದಾಗಿದೆ ಎಂದು ವಿವರಿಸಿದ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಶರಣಪ್ಪ ಅವರು, “ಇದು ಸಾಮೂಹಿಕ ಜವಾಬ್ದಾರಿಯಾಗಿದೆ. ಕಳೆದ ಕೆಲವು ವರ್ಷಗಳಿಂದ, ಈ ವ್ಯವಸ್ಥೆಯು ಜಾರಿಯಲ್ಲಿದೆ ಮತ್ತು ಮಾಲೀಕರು ತಮ್ಮ ಬಾಡಿಗೆದಾರರ ಹಿನ್ನೆಲೆ ಪರಿಶೀಲನೆಯನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮಾಲೀಕರಿಗೆ ಆರಂಭದಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಕಂಡು ಬಂದರೆ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಬೇಕೆಂದು ಹೇಳಿದರು.

SCROLL FOR NEXT