ರಾಜ್ಯ

ದೆಹಲಿಗಿಂದು ಸಿಎಂ ಬೊಮ್ಮಾಯಿ ಭೇಟಿ; ಸಂಪುಟ ವಿಸ್ತರಣೆಗೆ ಸಿಗುತ್ತಾ ಗ್ರೀನ್ ಸಿಗ್ನಲ್?

Manjula VN

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಮತ್ತೊಮ್ಮೆ ನವದೆಹಲಿಗೆ ಭೇಟಿ ನೀಡುತ್ತಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚಿಸುವ ನಿರೀಕ್ಷೆಯಿರುವುದರಿಂದ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಕುರಿತು ಮತ್ತೆ ಗುಸುಗುಸು ಶುರುವಾಗಿದೆ.

ನಡ್ಡಾ ಅವರು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರೂ, ಮುಖ್ಯಮಂತ್ರಿ ಬೊಮ್ಮಾಯಿಗೆ ಭೇಟಿಯಾಗಲು ಸಮಯ ನೀಡಲಿದ್ದಾರೆಂದು ಹೇಳಲಾಗುತ್ತಿದೆ.

ಈ ಬಾರಿಯ ಮಾತುಕತೆ ವೇಳೆ ಮಾಜಿ ಆರ್‌ಡಿಪಿಆರ್‌ ಸಚಿವ ಕೆಎಸ್‌ ಈಶ್ವರಪ್ಪ ಮತ್ತು ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಆದರೆ, ಡಿಸೆಂಬರ್ 8 ರಂದು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾದ ನಂತರವೇ ಸಂಪುಟ ವಿಸ್ತರಣೆ ಕುರಿತು ನಿರ್ಧಾರವಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಬೊಮ್ಮಾಯಿ ಅವರು ಎಸ್‌ಟಿ ನಾಯಕ ರಾಜುಗೌಡ, ಎಸ್‌ಸಿ ಮುಖಂಡ ಮತ್ತು ಕುಡಚಿ ಶಾಸಕ ಪಿ ರಾಜೀವ್ ಮತ್ತು ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಅವರ ಪರವಾಗಿ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಏಕೆಂದರೆ ಎಸ್‌ಸಿ/ಎಸ್‌ಟಿ ಕೋಟಾ ಹೆಚ್ಚಳದ ನಂತರ ಈ ನಾಯಕರ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳುವುದು ಈ ಸಮುದಾಯಗಳಿಗೆ ಸೂಕ್ತ ಸಂದೇಶವನ್ನು ರವಾನಿಸಲಿದೆ ಎನ್ನಲಾಗುತ್ತಿದೆ.

SCROLL FOR NEXT