ರಾಜ್ಯ

ಗಡಿ ವಿವಾದ: ಸುಪ್ರೀಂ ನಲ್ಲಿ ನಾಳೆ ವಿಚಾರಣೆ, ರಾಜ್ಯದ ಪರ ಸಮರ್ಥ ವಾದ ನಡೆಸುವ ಭರವಸೆಯಿದೆ- ಸಿಎಂ ಬೊಮ್ಮಾಯಿ

Nagaraja AB

ನವದೆಹಲಿ: ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ಈ  ಕುರಿತು ಹಿರಿಯ ವಕೀಲ ಮುಕುಲ್ ರೋಹಟಗಿ, ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಾಡುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನವದೆಹಲಿಯಲ್ಲಿಂದು ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಕುಲ್ ರೋಹಟಗಿ ಹಿರಿಯ ವಕೀಲರಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಸಂಬಂಧಪಟ್ಟ ಹಾಗೆ ಈಗಾಗಲೇ ಎಲ್ಲ ವಿಷಯವನ್ನು ನಮ್ಮ ಅಡ್ವೋಕೇಟ್ ಜನರಲ್ ವಿವರಿಸಿದ್ದಾರೆ. ಗಡಿ ವಿವಾದದ ಕಾನೂನಾತ್ಮಕ ಹಿನ್ನೆಲೆ ಬಗ್ಗೆ ರೋಹಟಗಿ ಅವರಿಗೆ ವಿವರಣೆ ನೀಡಿದ್ದೇನೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ ಎಂದು ಅವರು ತಿಳಿಸಿರುವುದಾಗಿ ಹೇಳಿದರು.  

ಮಹಾರಾಷ್ಟ್ರ ಸರ್ಕಾರ ಹಾಕಿರುವ ಮೇಂಟೈನಬಲಿಟಿ ಕುರಿತಾಗಿ ವಿಚಾರಣೆ ನಡೆಯಲಿದೆ. ಹಿಂದಿನ ಸಿಜೆಐ ದೀಪಕ್ ಮಿಶ್ರಾ ಅವರು ಮೇಂಟೈನಬಲಿಟಿ ವಿಚಾರವನ್ನು ಸಿದ್ದಪಡಿಸಿದ್ದರು. ಅದಕ್ಕೆ ನಮ್ಮ ಪ್ರತಿರೋಧ ಹೇಗಿರಬೇಕು ಎಂಬುದರ ಬಗ್ಗೆ ನಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಮಹಾರಾಷ್ಟ್ರದ ನಾಯಕರುಗಳು, ನಾವು ಗಂಭೀರವಾಗಿ ಇದೀವಿ ಅಂತ ತೋರಿಸಿಕೊಳ್ಳಲು ಆ ರೀತಿ ಮಾಡುತ್ತಿದ್ದಾರೆ ಎಂದರು.

ಕರ್ನಾಟಕಕ್ಕೆ ಸೇರಲು ನಿಯಮಗಳಿವೆ: ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿರುವ ಮಹಾರಾಷ್ಟ್ರದ ಕೆಲವು ಗ್ರಾಮಸ್ಥರು ಕರ್ನಾಟಕಕ್ಕೆ ಸೇರಲು ನಿರ್ಧರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಳ್ಳಿಗಳು ಸೇರ್ಪಡೆಯಾಗಲು ನಿಯಮಗಳಿವೆ. ಜತ್ ತಾಲೂಕಿನ 42 ಗ್ರಾಮಸ್ಥರು ಸಿಎಂ ಭೇಟಿಗೆ ಅವಕಾಶ ಕೇಳಿರುವ ಬಗ್ಗೆ ಉತ್ತರಿಸಿ ಈ ಸಮಸ್ಯೆ ಇಂದು ನಿನ್ನೆಯದಲ್ಲ. ಸರಿಯಾದ ಸೌಲಭ್ಯ ದೊರಕದ ಹಿನ್ನಲೆಯಲ್ಲಿ  ಅವರು ಈ ಹೇಳಿಕೆ ಬಹಳಷ್ಟು ವರ್ಷದಿಂದ‌ ನೀಡುತ್ತಿದ್ದಾರೆ. ಆದರೆ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದ್ದು, ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಲಾಗುವುದು. ಕಾನೂನು ಸಲಹೆ ಪಡೆದು ಮುಂದುವರೆಯುವುದಾಗಿ ತಿಳಿಸಿದರು. 

ರಾಜ್ಯ ಸಾರಿಗೆ ಸಂಸ್ಥೆ ಬಸ್ ಮೇಲೆ ದಾಳಿ ಪರಿಸ್ಥಿತಿ ನಿಯಂತ್ರಣಕ್ಕೆ: ರಾಜ್ಯಸಾರಿಗೆ ಸಂಸ್ಥೆ ಬಸ್ ಮೇಲೆ ದಾಳಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮಹಾರಾಷ್ಟ್ರ ಗೃಹ ಇಲಾಖೆಗೆ ಜೊತೆಗೆ ಈಗಾಗಲೇ ರಾಜ್ಯದ ಅಧಿಕಾರಿಗಳು ಮಾತನಾಡಿದ್ದಾರೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರು.

ಕೇಂದ್ರ ಸಚಿವರ ಭೇಟಿ ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಮಯ ಕೇಳಿದ್ದು, ನಾಳೆ ಸಮಯ ದೊರೆಯುವ ವಿಶ್ವಾಸವಿದೆ. ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಭೂಪೇಂದ್ರ ಯಾದವ್ ಮತ್ತು ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದು, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆಗೆ ಮೇಕೆದಾಟು, ಭದ್ರಾ ಮೇಲ್ಡಂಡೆ ಯೋಜನೆ, ಮಹದಾಯಿ ಬಗ್ಗೆ ಚರ್ಚೆ ಮಾಡಲಿರುವುದಾಗಿ ತಿಳಿಸಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಉದ್ಘಾಟನೆಗೆ ಆಹ್ವಾನಿಸಲಾಗುವುದು ಹಾಗೂ ಭೂಪೇಂದ್ರ ಯಾದವ್ ಅವರೊಂದಿಗೆ ಪರಿಸರ ಸಂಬಂಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ: ಇದೇ ವೇಳೆ ಸೈಲೆಂಟ್ ಸುನೀಲ್ ಜೊತೆಗೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ‌ ವಿಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ ಎಂದು ಲೆಕ್ಕ ಹಾಕಲಿ ಎಂದು ತಿರುಗೇಟು ನೀಡಿದರು.

SCROLL FOR NEXT