ರಾಜ್ಯ

ಬೆಂಗಳೂರು: ಖಿನ್ನತೆಯಿಂದ ಬಳಲುತ್ತಿದ್ದ ಡಿಆರ್‌ಡಿಒ ಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Ramyashree GN

ಬೆಂಗಳೂರು: ಸಿವಿ ರಾಮನ್‌ನಗರದಲ್ಲಿರುವ ಡಿಆರ್‌ಡಿಒ ಕ್ಯಾಂಪಸ್‌ನಲ್ಲಿ 48 ವರ್ಷದ ಭದ್ರತಾ ಸಿಬ್ಬಂದಿಯೊಬ್ಬರು ಕರ್ತವ್ಯದ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ಮುಂಜಾನೆ ಈ ಘಟನೆ ನಡೆದಿದ್ದು, ಕೆಲ ದಿನಗಳಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಆತನ ಕುಟುಂಬದವರು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ರಾಣೆಬೆನ್ನೂರು ಮೂಲದ ಕರೇಗೌಡ ಎಂದು ಗುರುತಿಸಲಾಗಿದ್ದು, ಕುಟುಂಬ ಸಮೇತ ನಾಗಸಂದ್ರದಲ್ಲಿ ವಾಸವಿದ್ದರು. ಬೆಳಗ್ಗೆ 6.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಅವರು ತನ್ನ ಹಣೆಯ ಮೇಲೆ ಎಸ್‌ಎಲ್‌ಆರ್ ಗನ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡೇಟಿನ ಸದ್ದು ಕೇಳಿದ ಮತ್ತೊಬ್ಬ ಸಿಬಂದಿ ಹಿರಿಯ ಅಧಿಕಾರಿಗೆ ಮಾಹಿತಿ ನೀಡಿ ಬೈಯಪ್ಪನಹಳ್ಳಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಕರೇಗೌಡ ಅವರು ನಾಲ್ಕು ವರ್ಷಗಳ ಹಿಂದೆ ರಕ್ಷಣಾ ಭದ್ರತಾ ಪಡೆಗೆ ಸೇರುವ ಮೊದಲು 18 ವರ್ಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ ಕೆಲವು ದಿನಗಳಿಂದ ಅವರು ಅಸಮಾಧಾನಗೊಂಡಿದ್ದು ಕಾಣಿಸುತ್ತಿತ್ತು ಮತ್ತು ಸಹೋದ್ಯೋಗಿಗಳೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಸದ್ಯ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಗೆ ಕೆಲಸದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಅವರ ಯಾವುದೇ ಸಮಸ್ಯೆಗಳನ್ನು ಕುಟುಂಬದವರೊಂದಿಗೆ ಅವರು ಹಂಚಿಕೊಳ್ಳುತ್ತಿರಲಿಲ್ಲ. ಅವರ ಸಾವಿಗೆ ಯಾರೂ ಜವಾಬ್ದಾರರಲ್ಲ ಎಂದು ಕರೇಗೌಡರ ಪತ್ನಿ ಕಮಲಾಕ್ಷಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಬೈಯಪನಹಳ್ಳಿ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಈ ಕೃತ್ಯದ ಹಿಂದಿನ ಕಾರಣಗಳು ಇನ್ನಷ್ಟೇ ತಿಳಿಯಬೇಕಿದೆ.

ಡಿಆರ್‌ಡಿಒ ವಕ್ತಾರರ ಪ್ರಕಾರ, 'ಸಂಜೆಯವರೆಗೂ ಘಟನೆಯ ಬಗ್ಗೆ ನಮಗೆ ತಿಳಿದಿರಲಿಲ್ಲ ಮತ್ತು ಮೃತರ ವಿವರಗಳನ್ನು ಹಂಚಿಕೊಳ್ಳಲು ಏನೂ ಇಲ್ಲ' ಎಂದು ತಿಳಿಸಿದ್ದಾರೆ.

SCROLL FOR NEXT