ರಾಜ್ಯ

ಸರ್ಕಾರಿ ನೌಕರರು ಪುಣ್ಯಕೋಟಿಯನ್ನು ದತ್ತು ಪಡೆಯಬೇಕು: ಸಚಿವ ಪ್ರಭು ಚವ್ಹಾಣ್ ಮನವಿ

Lingaraj Badiger

ಬೆಂಗಳೂರು: ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರು, ಅಧಿಕಾರಿಗಳು ಹಾಗೂ ಇತರೆ ಸಂಸ್ಥೆಗಳ ನೌಕರರು ಗೋವುಗಳನ್ನು ದತ್ತು ಪಡೆಯುವ ಮೂಲಕ ರಾಜ್ಯ ಸರ್ಕಾರ‌ ಜಾರಿಗೆ ತಂದಿರುವ ಪುಣ್ಯಕೋಟಿ ದತ್ತು ಯೋಜನೆಯಲ್ಲಿ ಭಾಗಿಯಾಗಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಮ್ಮ ಸರ್ಕಾರ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020ನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಗೋವುಗಳನ್ನು ಸಂರಕ್ಷಿಸಿ, ಗೋಶಾಲೆಗಳನ್ನು ಸಬಲೀಕರಣಗೊಳಿಸುವುದು ನಮ್ಮ ಉದ್ದೇಶವಾಗಿರುತ್ತದೆ ಎಂದಿದ್ದಾರೆ.

ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಸದಾ ಒತ್ತು ನೀಡುವ ಸಲುವಾಗಿ ರಾಜ್ಯದಲ್ಲಿ 200ಕ್ಕೂ ಹೆಚ್ಚು ಖಾಸಗಿ ಗೋಶಾಲೆಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆಗಳನ್ನು ಸ್ಥಾಪಿಸಲಾಗುತ್ತಿದ್ದು, ಗೋವು ಮತ್ತು ಅದರ ಸಂತತಿಗೆ ಆಶ್ರಯ ನೀಡಿ ಆರೈಕೆ‌ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಯೋಜನೆಗೆ ಧನ ಸಹಾಯ ನೀಡುವವರಿಗೆ ಆದಾಯ ತೆರಿಗೆ 80G ಅಡಿ ವಿನಾಯಿತಿ ಸೌಲಭ್ಯ ಸಿಗಲಿದೆ ಎಂದು ಪ್ರಭು ಚವ್ಹಾಣ್ ವಿವರಿಸಿದ್ದಾರೆ.

ನಿರ್ಗತಿಕ‌, ಪರಿತ್ಯಕ್ತ, ಅನಾರೋಗ್ಯ, ಅಶಕ್ತ, ವಯಸ್ಸಾದ ಜಾನುವಾರುಗಳನ್ನು ಹಾಗೂ ರೈತರು ಸಾಕಲಾಗದ ಹಸು-ಕರುಗಳನ್ನು ಪೋಷಿಸಲು ಹಾಗೂ ರಾಜ್ಯದ ಗೋಶಾಲೆಗಳನ್ನು ಆತ್ಮನಿರ್ಭರವಾಗಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸರ್ಕಾರದ ಅವಿಭಾಜ್ಯ ಅಂಗವಾಗಿರುವ ರಾಜ್ಯದ ಸರ್ಕಾರಿ ನೌಕರರು ಪುಣ್ಯಕೋಟಿ ಸಂತತಿ ರಕ್ಷಣೆಗೆ ಯಾವುದಾದರೊಂದು ತಿಂಗಳ ವೇತನದಲ್ಲಿ ಒಂದು ಬಾರಿಗೆ ದೇಣಿಗೆ ನೀಡಿ ರಾಜ್ಯದ ಗೋಶಾಲೆಗಳ ಗೋವುಗಳನ್ನು ಪೋಷಿಸುವ ಕಾರ್ಯದಲ್ಲಿ ಭಾಗಿಯಾಗಿ ಸರ್ಕಾರದ ಈ ಮಹತ್ಕಾರ್ಯದಲ್ಲಿ ಕೈಜೋಡಿಸುವಂತೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರೊಂದಿಗೆ ಪೋನ್ ಮೂಲಕ ಮಾತನಾಡಿರುವುದಾಗಿ ಪ್ರಭು ಚವ್ಹಾಣ್ ಮಾಹಿತಿ ನೀಡಿದ್ದಾರೆ.

ಗೋಮಾತಾ ಸಂರಕ್ಷಣೆಗೆಂದೇ ವಿಶೇಷ-ವಿಶಿಷ್ಠ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಾವೇರಿ ಜಿಲ್ಲಾ ಗೋಶಾಲೆಯಲ್ಲಿ ಗೋವು ದತ್ತು ಪಡೆದಿದ್ದಾರೆ. ಇವರೊಂದಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರುಷ್ಠಾಧಿಕಾರಿಗಳು, ಜಿಪಂ ಸಿಇಒ, ವಿವಿಧ ಇಲಾಖಾಧಿಕಾರಿ, ಸಿಬ್ಬಂದಿಗಳು, ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಪುಣ್ಯಕೋಟಿ ದತ್ತು ಪಡೆದಿರುವ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿರುವ ಪ್ರಭು ಚವ್ಹಾಣ್, ಜಿಲ್ಲೆಗೊಂದರಂತೆ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿ 31 ಗೋವುಗಳನ್ನು ದತ್ತು ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

ಐಎಎಸ್, ಐಪಿಎಸ್, ಕೆಎಎಸ್, ವಿವಿದ ಇಲಾಖಾಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳು ಹಾಗೂ ನಿಗಮ/ಮಂಡಳಿ/ಪ್ರಾಧಿಕಾರ/ವಿಶ್ವವಿದ್ಯಾಲಯ ಅಧಿಕಾರಿ-ಸಿಬ್ಬಂದಿಗಳು ತಮ್ಮ ಸ್ವಂತ ಆದಾಯದಿಂದ ಮೂಕ ಪ್ರಾಣಿಗಳ ಸೇವೆಗೆ ಕಟ್ಟಿಬದ್ಧರಾಗಬೇಕಾಗಿದೆ. ಈ ಯೋಜನೆ ಯಶಸ್ವಿಯಾಗಲು ಸರ್ಕಾರಿ ನೌಕರರು, ಉದ್ಯಮಿಗಳು, ಗುತ್ತಿಗೆದಾರರು, ಸಂಘ-ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಉದ್ಯಮಿಗಳು ಮತ್ತು ಸಾರ್ವಜನಿಕ ಸಹಭಾಗಿತ್ವ-ಸಹಕಾರ ಅತ್ಯಗತ್ಯವಾಗಿದೆ ಎಂದು ಪ್ರಭು ಚವ್ಹಾಣ್ ಅವರು ಹೇಳಿದ್ದಾರೆ.

SCROLL FOR NEXT