ರಾಜ್ಯ

ಟ್ಯಾಕ್ಸಿ ಕಂಪನಿಗಳು ಸರ್ಕಾರ ನಿಗದಿಪಡಿಸಿದ ದರದ ಮೇಲೆ ಶೇ. 10 ಹೆಚ್ಚುವರಿ ಹಾಗೂ ಜಿಎಸ್ ಟಿ ವಿಧಿಸಲು ಹೈಕೋರ್ಟ್ ಅಸ್ತು

Lingaraj Badiger

ಬೆಂಗಳೂರು: ಆಪ್ ಆಧಾರಿತ ಆಟೋರಿಕ್ಷಾ ಸೇವೆಗಳಿಗೆ ದರ ನಿಗದಿಪಡಿಸುವ ಕುರಿತು ರಾಜ್ಯ ಸರ್ಕಾರ ನಡೆಸಿದ ಹೊಸ ಸುತ್ತಿನ ಮಾತುಕತೆಯಲ್ಲಿ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರದ ಕಾರಣ, ಹೈಕೋರ್ಟ್ ಶುಕ್ರವಾರ ಟ್ಯಾಕ್ಸಿ ಸಂಸ್ಥೆಗಳು ಆಟೋರಿಕ್ಷಾ ಸೇವೆಗೆ ಸರ್ಕಾರ ನಿಗದಿಪಡಿಸಿದ ದರದ ಮೇಲೆ ಶೇ. 10 ಹೆಚ್ಚುವರಿ ಹಾಗೂ ಜಿಎಸ್ ಟಿ ವಿಧಿಸಲು ಅನುಮತಿ ನೀಡಿದೆ.

ಆಪ್ ಆಧಾರಿತ ಆಟೋರಿಕ್ಷಾ ಸೇವೆಗಳಿಗೆ ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರು ಇಂದು ಮಧ್ಯಂತರ ಆದೇಶ ಹೊರಡಿಸಿದ್ದು, 15 ದಿನಗಳಲ್ಲಿ ದರ ನಿಗದಿಪಡಿಸುವಂತೆ ಮತ್ತು ಓಲಾ, ಉಬರ್‌ ಕಂಪನಿಗಳಿಗೆ ಅನುಕೂಲಕರ ದರವನ್ನು ವಿಧಿಸಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಸೂಚಿಸಿದೆ.

ಈ ಕಂಪನಿಗಳ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತೆ ಇಲ್ಲ ಮತ್ತು ಕಂಪನಿಗಳ ಪರವಾನಿಗೆ ಕಾಲಾವಕಾಶ ವಿಸ್ತರಿಸುವಂತೆ ಆದೇಶಿಸಿ ಈ ಪ್ರಕರಣದ ವಿಚಾರಣೆಯನ್ನು ನವೆಂಬರ್‌ 7ಕ್ಕೆ ಮುಂದೂಡಿದೆ. 

ಇದಕ್ಕೂ ಮುನ್ನ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವಡಗಿ ಅವರು ಗುರುವಾರ ನಡೆದ ಸಭೆಯಲ್ಲಿ ವಿಧಿಸಬೇಕಾದ ದರದ ಕುರಿತು ಯಾವುದೇ ಒಮ್ಮತಕ್ಕೆ ಬರಲಿಲ್ಲ ಮತ್ತು ಸಮಸ್ಯೆಯನ್ನು ಪರಿಹರಿಸಲು ಸರ್ಕಾರಕ್ಕೆ ಗರಿಷ್ಠ 15 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ನಾಳೆಯಿಂದ ಸುಮಾರು ಎರಡು ಕಿ.ಮೀ.ಯವರೆಗಿನ ಆಪ್ ಆಧಾರಿತ ಆಟೋ ಪ್ರಯಾಣಕ್ಕೆ 30 ರೂಪಾಯಿ ದರದ ಜತೆಗೆ, ಶೇಕಡ 10 ರಷ್ಟು ಹೆಚ್ಚುವರಿ ಹಾಗೂ ಜಿಎಸ್‌ಟಿಯೂ ಇರಲಿದೆ.

SCROLL FOR NEXT