ರಾಜ್ಯ

ಬೆಂಗಳೂರು: ಮಳೆಯಿಂದ ರಕ್ಷಣೆ ಪಡೆಯಲು ಅಂಡರ್ ಪಾಸ್ ನಲ್ಲಿ ವಾಹನ ನಿಲ್ಲಿಸಿದರೆ ದಂಡ!

Shilpa D

ಬೆಂಗಳೂರು: ಮಳೆ ಬರುವ ವೇಳೆ  ಅಂಡರ್​ಪಾಸ್​ನಲ್ಲಿ ವಾಹನ ನಿಲ್ಲಿಸಿಕೊಂಡು ನಿಂತರೆ ದಂಡ ವಿಧಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ, ಮಳೆ ಬರುವ ಸಂದರ್ಭದಲ್ಲಿ ಬ್ರಿಡ್ಜ್ ಗಳ ಕೆಳಗೆ ಮತ್ತು ಅಂಡರ್ ಪಾಸ್ ಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ವಾಹನ ನಿಲ್ಲಿಸುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು.

ಮೊದಲ ಬಾರಿಗೆ 500 ರೂ. ದಂಡವನ್ನು ವಿಧಿಸಲಾಗುತ್ತದೆ ಮತ್ತು ಎರಡನೇ ಬಾರಿಗೆ 1,000 ರೂ ದಂಡ ವಿಧಿಸಲಾಗುತ್ತದೆ.  ಅಂಡರ್ ಪಾಸ್‌ನಲ್ಲಿ ವಾಹನ ನಿಲ್ಲಿಸುವುದರಿಂದ ಹಿಂಬದಿಯಿಂದ ಬರುವ ವಾಹನಗಳಿಂದ ಅಪಘಾತ ಸಂಭವಿಸುತ್ತಿದೆ. ಒಟ್ಟು 3 ಕಡೆ ಈ ರೀತಿಯ ಪ್ರಕರಣ ದಾಖಲಾಗಿದೆ. ಹೀಗಾಗಿ ಅಂಡರ್ ಪಾಸ್ ನಲ್ಲಿ, ಬ್ರಿಡ್ಜ್ ಕೆಳಗೆ ವಾಹನ ನಿಲ್ಲಿಸುವ ಬದಲು ಹತ್ತಿರದ ಅಂಗಡಿಗಳಲ್ಲಿ ಆಶ್ರಯ ಪಡೆಯುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ಅಂಡರ್‌ಪಾಸ್‌ಗಳು ಮಳೆಯ ಸಮಯದಲ್ಲಿ ವಾಹನಗಳನ್ನು ನಿಲ್ಲಿಸಲು ಅಸುರಕ್ಷಿತ ತಾಣಗಳಾಗಿವೆ, ಏಕೆಂದರೆ ಎರಡೂ ತುದಿಗಳಿಂದ ನೀರು ಅಲ್ಲಿ ಸಂಗ್ರಹವಾಗುತ್ತದೆ, ಜೊತೆಗೆ ವಾಹನಗಳ ಸುಗಮ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ, ಟ್ರಾಫಿಕ್ ಅವ್ಯವಸ್ಥೆಗೆ ಕಾರಣವಾಗುತ್ತದೆ ಎಂದು ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ಸ್‌ನ ಸಿಇಒ ಎಂಎನ್ ಶ್ರೀಹರಿ ಹೇಳಿದ್ದಾರೆ.

ನಗರದಲ್ಲಿ ಕಳೆದ 26 ದಿನಗಳಿಂದ ಮಳೆಯಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಅಂಡರ್‌ಪಾಸ್‌ಗಳಲ್ಲಿ ವಾಹನ ನಿಲ್ಲಿಸಿಕೊಂಡು ನಿಂತಿರುವುದನ್ನು ನೋಡಿದ್ದೇವೆ. ಅಂತಹ 46 ಅಂಡರ್‌ಪಾಸ್‌ಗಳನ್ನು ಗುರುತಿಸಿರುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ  ತಿಳಿಸಿದ್ದಾರೆ. 

ಮಳೆ ಬಂತೆಂದು ಅಂಡರ್​ಪಾಸ್​ನಲ್ಲಿ ವಾಹನ ನಿಲ್ಲಿಸಿಸಲಾಗುತ್ತಿದ್ದು, ಇದರಿಂದ ಟ್ರಾಫಿಕ್ ​ಜಾಮ್​ ಉಂಟಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಹೆವಿ ವೆಹಿಕಲ್ಸ್​ ಪಾಸ್​ ಆದಾಗ ಅಪಘಾತವಾಗುತ್ತದೆ. ಹೀಗಾಗಿ ಇನ್ಮುಂದೆ ಅಂಡರ್​ಪಾಸ್​ನಲ್ಲಿ ವಾಹನ ನಿಲ್ಲಿಸದಂತೆ ಸೂಚನೆ ನೀಡಲಾಗಿದೆ. ಕೆಳಸೇತುವೆಯಲ್ಲಿ ಗಾಡಿ ನಿಲ್ಲಿಸಿ ಟ್ರಾಫಿಕ್​ಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.

SCROLL FOR NEXT