ರಾಜ್ಯ

ಮಣಿಪಾಲ: ಹೊರದಬ್ಬಿದ ಬೌನ್ಸರ್ ಗಳ ವಿರುದ್ಧ ಆಕ್ರೋಶ; ಕಾರು ಅಡ್ಡಾದಿಡ್ಡಿ ಚಾಲನೆ, 2 ಕಾರು ಜಖಂ, ಬೆಂಗಳೂರು ಟೆಕಿ ಸೇರಿ 4 ಮಂದಿ ಬಂಧನ

Srinivasamurthy VN

ಉಡುಪಿ: ಪಬ್ ನಲ್ಲಿ ಗಲಾಟೆ ಮಾಡಿದ ಕಾರಣಕ್ಕೆ ಬೌನ್ಸರ್ ಗಳಿಂದ ಹೊರದಬ್ಬಿಸಿಕೊಂಡ ಬೆಂಗಳೂರು ಮೂಲದ ಟೆಕಿಗಳು ಬಳಿಕ ಕಾರು ಅಡ್ಡಾದಿಡ್ಡಿ ಚಾಲನೆ ಮಾಡಿ ಬೌನ್ಸರ್ ಗಳಿಗೆ ಗುದ್ದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮದುವೆ ನಿಮಿತ್ತ ಸ್ನೇಹಿತರೊಂದಿಗೆ ಉಡುಪಿಗೆ ಆಗಮಿಸಿದ್ದ ಟೆಕಿಗಳ ಗುಂಪು ಪಬ್ ಗೆ ಬಂದಿದೆ. ಈ ವೇಳೆ ಡಿಜೆ ಹಾಡಿನ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ತೆಗೆದಿದ್ದಾರೆ. ತಮ್ಮ ನೆಚ್ಚಿನ ಹಾಡುಗಳನ್ನು ನುಡಿಸಬೇಕೆಂದು ಒತ್ತಾಯಿಸಿ ಗಲಾಟೆ ಮಾಡಿದಾಗ ಬೌನ್ಸರ್ ಗಳು ಅವರನ್ನು ಹೊರದಬ್ಬಿದ್ದಾರೆ. ಈ ವೇಳೆ ಟೆಕಿಗಳ ಗುಂಪು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದು, ಮಾತ್ರವಲ್ಲದೇ ಅದೇ ಆಕ್ರೋಶದಿಂದ ತಮ್ಮ ಕಾರು ಹತ್ತಿ ಬೌನ್ಸರ್ ಗಳ ಮೇಲೆ ಚಲಾಯಿಸಿದ್ದಾರೆ.

ಈ ವೇಳೆ ಅಡ್ಡಾದಿಡ್ಡಿ ಚಾಲನೆ ಮಾಡಿದ್ದು, ಅಲ್ಲಿಯೇ ಇದ್ದ ಕಾರುಗಳಿಗೆ ಗುದ್ದಿದ್ದಾರೆ. ಅಲ್ಲದೆ ವಿಕ್ರಾಂತ್‌ ಎಂಬ ಪಬ್ ಸಿಬ್ಬಂದಿ ಕೂಡ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಾನಿಗೀಡಾದ ಕಾರುಗಳು ಸಾವಿತ್ರಿ ಶೆಟ್ಟಿ ಮತ್ತು ರೋಷನ್ ಎಂಬುವರಿಗೆ ಸೇರಿದ್ದು. ಸ್ಥಳೀಯರು ವಿಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

4 ಮಂದಿ ಬಂಧನ
ಸೆ.3ರಂದು  ರಾತ್ರಿ ಮಣಿಪಾಲದ ಪಬ್‌ಗ ಬಂದಿದ್ದ ಗ್ರಾಹಕ ಪಬ್‌ನಿಂದ ಹೊರಗೆ ಹೋಗುವಾಗ ತನ್ನ ಇನ್ನೋವಾ ಕಾರನ್ನು ಕುಡಿದ ಮತ್ತಿನಲ್ಲಿ ಹಿಮ್ಮುಖವಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದಾನೆ. ಪರಿಣಾಮ ಪಬ್‌ ನೌಕರ ವಿಕ್ರಾಂತ್‌ ಅವರ ಕಾಲಿಗೆ ಗಾಯ ಉಂಟು ಮಾಡಿದ್ದಲ್ಲದೆ ಪಾರ್ಕಿಂಗ್‌ನಲ್ಲಿದ್ದ ಸ್ಕೋಡಾ ಮತ್ತು ಫಾರ್ಚೂನರ್‌ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾರೆ. ಜಿಎ08ಎಫ್ 3696 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಇನ್ನೋವಾ ಕಾರನ್ನು ಅವರು ಚಲಾಯಿಸುತ್ತಿದ್ದರು. ಚಾಲನೆ ವೇಳೆ ಸುಹಾಸ್‌ ಮದ್ಯ ಸೇವನೆ ಮಾಡಿದ್ದು ದೃಢಪಟ್ಟಿದೆ. ಇನ್ನಿತರ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ತಪಾಸಣೆಗೆ ಒಳಪಡಿಸಲಾಗಿದೆ. ಇನ್ನೋವಾ ಕಾರಿನಲ್ಲಿದ್ದ ಸುಹಾಸ್‌ ಅವರ ಸ್ನೇಹಿತರಾದ ಭರತ್‌, ನವೀನ್‌ ಕಲ್ಯಾಣ್‌, ನಿರ್ಮಲಾ, ಕವನಾ ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

ಇವರೆಲ್ಲರೂ ಬೆಂಗಳೂರು ಮತ್ತು ಶಿವಮೊಗ್ಗ ಮೂಲದವರಾಗಿದ್ದು, ಬೆಂಗಳೂರಿನಲ್ಲಿ, ಐಟಿ ಸೆಕ್ಟರ್‌ನಲ್ಲಿ  ನೌಕರಿ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಇವರೆಲ್ಲರೂ ಸಂಬಂಧಿಕರ ಮದುವೆಗೆ ಉಡುಪಿಗೆ ಬಂದಿದ್ದು, ರಾತ್ರಿ  ಪಬ್‌ಗೆ ಬಂದಿದ್ದರು. ಈ ಅಪಘಾತದಿಂದ 1 ಸ್ಕೋಡಾ ಕಾರು ಹಾಗೂ ಮತ್ತೂಂದು ಫಾರ್ಚುನರ್‌ ಕಾರು ಜಖಂಗೊಂಡಿದೆ. ಫಾರ್ಚೂನರ್‌ ಕಾರು ಚಾಲಕ ರೋಶನ್‌ ಅವರು ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪಘಾತಪಡಿಸಿದ ಕಾರು ಚಾಲಕ ಮತ್ತು ಇತರೆ 4 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಬಂಧಿತರನ್ನು ಶಿವಮೊಗ್ಗ ಮೂಲದ ಸುಹಾಸ್ ಮತ್ತು ಇತರ ಟೆಕ್ಕಿಗಳಾದ ಭರತ್, ನವೀನ್ ಕಲ್ಯಾಣ್, ನಿರ್ಮಲಾ ಮತ್ತು ಕವನಾ ಅವರ ವಯಸ್ಸು 20 ಎಂದು ಗುರುತಿಸಲಾಗಿದೆ. ಸುಹಾಸ್ ವಿರುದ್ಧ ಐಪಿಸಿ ಸೆಕ್ಷನ್ 279 ಮತ್ತು 337 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಗುಂಪು ಮಾದಕ ವಸ್ತುವಿನ ಅಮಲಿನಲ್ಲಿದ್ದ ಕಾರಣ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ಸೋಮವಾರ ಫಲಿತಾಂಶ ನಿರೀಕ್ಷಿಸಲಾಗಿದ್ದು, ಸ್ಥಳದಲ್ಲಿದ್ದ ಜನರು ಸುರಕ್ಷತೆಗಾಗಿ ಹರಸಾಹಸ ಪಡಬೇಕಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು TNIE ಗೆ ತಿಳಿಸಿದ್ದಾರೆ.

SCROLL FOR NEXT