ಶಾಸಕ ಬಸವರಾಜ ದಢೇಸುಗೂರು 
ರಾಜ್ಯ

ಪಿಎಸ್ಐ ನೇಮಕಾತಿ ಹಗರಣ: ಅಭ್ಯರ್ಥಿಗಳಿಂದ ಹಣ ಪಡೆದ ಆರೋಪ!; ಶಾಸಕ ಬಸವರಾಜ ದಢೇಸುಗೂರು ಆಡಿಯೋ ಲೀಕ್, ವೈರಲ್

ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ಲೀಕ್ ಆಗಿದ್ದು, ಸ್ವತಃ ಸ್ಥಳೀಯ ಶಾಸಕರೇ ಅಭ್ಯರ್ಥಿಗಳಿಂದ ಹಣ ಪಡೆದಿದ್ದೇನೆ ಎಂದು ಹೇಳಿಕೊಂಡಿರುವ ಆಡಿಯೋ ಟೇಪ್ ಇದೀಗ ವ್ಯಾಪಕ ವೈರಲ್ ಆಗಿದೆ.

ಕೊಪ್ಪಳ: ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ಲೀಕ್ ಆಗಿದ್ದು, ಸ್ವತಃ ಸ್ಥಳೀಯ ಶಾಸಕರೇ ಅಭ್ಯರ್ಥಿಗಳಿಂದ ಹಣ ಪಡೆದಿದ್ದೇನೆ ಎಂದು ಹೇಳಿಕೊಂಡಿರುವ ಆಡಿಯೋ ಟೇಪ್ ಇದೀಗ ವ್ಯಾಪಕ ವೈರಲ್ ಆಗಿದೆ.

ಹೌದು.. ಪಿಎಸ್ ಐ ಅಕ್ರಮ ನೇಮಕಾತಿ ಹಗರಣದಲ್ಲಿ ಅಭ್ಯರ್ಥಿಗಳಿಂದ ಹಣ ಪಡೆದಿದ್ದನ್ನು ಆಡಳಿತ ಪಕ್ಷದ ಶಾಸಕ ಒಪ್ಪಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಮೂಲಕ ಪಿಎಸ್ಐ ನೇಮಕಾತಿ ಹಗರಣ ಮತ್ತೊಂದು ತಿರುವು ಪಡೆದಿದೆ. ಹಗರಣಕ್ಕೆ ಸಂಬಂಧಿಸಿದಂತೆ ಆಡಿಯೋ ವೈರಲ್ ಆಗಿದೆ. ಪಿಎಸ್ ಐ ನೇಮಕಾತಿಗಾಗಿ ಹಣ ಪಡೆದಿದ್ದನ್ನು ಕೊಪ್ಪಳ ಜಿಲ್ಲೆಯ ಕ‌ನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಒಪ್ಪಿಕೊಂಡಿದ್ದು, ಪರಸಪ್ಪ ಎಂಬುವರ ಮಗನ ನೇಮಕಾತಿಗೆ ಹಣ ಪಡೆದಿರುವ ಶಾಸಕರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ವೈರಲ್ ಆಗಿದೆ. 

ಬಳ್ಳಾರಿ ಜಿಲ್ಲೆ ಸಿರುಗುಪ್ಪ ಮೂಲದ ಪರಸಪ್ಪ ಎಂಬುವವರಿಂದ ಹಣ ಪಡೆದು ಸರಕಾರಕ್ಕೆ ಹಣ ಮುಟ್ಟಿಸಿರುವುದಾಗಿ ಶಾಸಕ ದಢೇಸುಗೂರು ಒಪ್ಪಿಕೊಂಡಿದ್ದು, ಹಣ ವಾಪಾಸ್ ಕೇಳಿದ್ದಕ್ಕೆ ಪರಸಪ್ಪನನ್ನು ತರಾಟೆಗೆ ತೆಗೆದುಕೊಂಡಿರುವ ಶಾಸಕರ ನಡೆ ಆಕ್ರೋಶಕ್ಕೀಡಾಗಿದೆ. ಆ ಮೂಲಕ ಈ ಆಡಿಯೋ ಟೇಪ್ ಇದೀಗ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ತನಿಖೆಯ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಎನ್ನಲಾಗಿದೆ.

ವೈರಲ್ ಆಡಿಯೋ: 

ಶಾಸಕರ ಬಂಧನಕ್ಕೆ ಆಗ್ರಹ
ಇನ್ನು ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರಕ್ಕೆ ಹಣ ನೀಡಿರುವುದಾಗಿ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಹೇಳಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ಇದರ ವಿರುದ್ಧ ರೊಚ್ಚಿಗೆದ್ದಿರುವ ವಿಪಕ್ಷಗಳು ಶಾಸಕರನ್ನು ಬಂಧಿಸುವಂತೆ ಆಗ್ರಹಿಸುತ್ತಿವೆ. ಈ ಕುರಿತು ಮಾತನಾಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು, ವೈರಲ್ ಆಡಿಯೋ ಕುರಿತು ಶಾಸಕರು ಸ್ಪಷ್ಟನೆ ನೀಡಬೇಕು ಮತ್ತು ಅವರನ್ನು ಈ ಕೂಡಲೇ ಬಂಧಿಸಿ ಪ್ರಕರಣದ ವಿಚಾರಣೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನಗರದಲ್ಲಿ ಸೋಮವಾರ ಗವಿಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. 

'ಈ ಪ್ರಕರಣದಲ್ಲಿ ಸರ್ಕಾರ ಉತ್ತರಿಸಬೇಕು. ಅಕ್ರಮವಾಗಿ ಪಡೆದ ಹಣವನ್ನು ಸರ್ಕಾರಕ್ಕೆ ಕೊಟ್ಟಿದ್ದಾಗಿ ಹೇಳಿದ್ದಾರೆ. ತಕ್ಷಣ ಶಾಸಕನನ್ನು ಬಂಧಿಸಬೇಕು. ಪ್ರಕರಣದಲ್ಲಿ ಯಾರಾರು ಇದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರ ಕೆಂಪಣ್ಣ 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದಾರೆ. ಈ ಕುರಿತ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಗವಿಮಠಕ್ಕೆ ಭೇಟಿ ನೀಡಿದ ಎಂಬಿಪಿ ಗವಿಶ್ರೀಗಳ ಆಶೀರ್ವಾದ ಪಡೆದರು. ಕೆಲ ಹೊತ್ತು ಕುಶಲೋಪರಿ ವಿಚಾರಿಸಿದರು. ಬಳಿಕ ಗದ್ದುಗೆ ದರ್ಶನ ಪಡೆದರು.

ಆಕ್ರೋಶದ ಬೆನ್ನಲ್ಲೇ ಶಾಸಕರಿಂದ ಸ್ಪಷ್ಟನೆ
ಪಿಎಸ್ ಐ ಹಗರಣದಲ್ಲಿ ವ್ಯಕ್ತಿಯಿಂದ ನಾನು ಹಣ ಪಡೆದಿಲ್ಲ. ಆಡಿಯೋದಲ್ಲಿನ ಧ್ವನಿ ನನ್ನದೆ ಎಂದು ಕನಕಗಿರಿ ಶಾಸಕ‌ಬಸವರಾಜ ದಢೇಸುಗೂರು ಹೇಳಿದರು. ಆಡಿಯೋ ವೈರಲ್ ಆದ ಬೆನ್ನಲ್ಲೇ  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಧ್ವನಿ ನನ್ನದೇ. ಆದರೆ ನಾನು ಹಣ ಪಡೆದಿಲ್ಲ. ಬೇರೆ ಇಬ್ಬರ ‌ನಡುವೆ ಜಗಳ ಉಂಟಾಗಿತ್ತು. ಅದನ್ನು ಪರಿಹರಿಸುವಂತೆ ನನ್ನ ಬಳಿ‌ ಬಂದಿದ್ದರು. ಅವರಿಬ್ಬರನ್ನೂ ಒಟ್ಟುಗೂಡಿಸಿ‌ ರಾಜಿ ಪಂಚಾಯಿತಿ ನಡೆಸಿರುವೆ. ಅದೇ ಸಂಭಾಷಣೆಯನ್ನು ವೈರಲ್ ಮಾಡಿದ್ದಾರೆ. ವರ್ಷಗಳ ಹಿಂದಿನಿಂದಲೂ ಸಮಸ್ಯೆ ಇತ್ತು. ಪರಿಹರಿಸುವಂತೆ ನನ್ನ ಕೇಳಿದ್ದರು. ಅದನ್ನೇ ಮಾತನಾಡಿರುವೆ. ಚುನಾವಣಾ ವರ್ಷವಿದ್ದು, ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಹೀಗಾಗಿ ಆಡಿಯೋ, ವಿಡಿಯೋ ವೈರಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ತನಿಖೆ ನಡೆಸುತ್ತೇವೆ ಎಂದ ಸಚಿವ ಆನಂದ್ ಸಿಂಗ್
ಇನ್ನು ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ವಿರುದ್ಧ ಬಂದಿರುವ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರವಾಸೋದ್ಯಮ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್ ಹೇಳಿದ್ದು, ಶಾಸಕ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 15 ಲಕ್ಷ ರೂಪಾಯಿ ಪಡೆದಿರುವ ಆರೋಪ ಕೇಳಿಬಂದಿದೆ. ನಾನು ಶಾಸಕರೊಂದಿಗೆ ಮಾತನಾಡಿದ್ದೇನೆ. ಶಾಸಕರು ಯಾರಿಂದಲೂ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ತನಿಖೆ ಆರಂಭವಾಗಲಿ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT