ರಾಜ್ಯ

ದೊಡ್ಡಬಳ್ಳಾಪುರ: ಕಾರ್ಖಾನೆಯಲ್ಲಿ ಕೆಮಿಕಲ್ ಸ್ಫೋಟ; ಹೊತ್ತಿ ಉರಿದ ಕಾರ್ಖಾನೆ

Srinivasamurthy VN

ದೊಡ್ಡಬಳ್ಳಾಪುರ: ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಇಡೀ ಕಾರ್ಖಾನೆ ಬೆಂಕಿಗಾಹುತಿಯಾದ ಘಟನೆ ಸೋಮವಾರ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಕೆಮಿಕಲ್‌ ಬ್ಲಾಸ್ಟ್‌ನಿಂದ ಕೆಮಿಕಲ್ ಕಾರ್ಖಾನೆಯೊಂದು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿರುವ ‘ರೆಸೋನನ್ಸ್ ಕೆಮಿಕಲ್’ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಬಳಿಕ ಬೆಂಕಿ ಇಡೀ ಕಾರ್ಖಾನೆಗೆ ವ್ಯಾಪಿಸಿದೆ. ಬೆಂಕಿಯಲ್ಲಿ ಕಾರ್ಖಾನೆ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ದುರಂತ ಸಂಭವಿಸಿದ ವೇಳೆ ಕಾರ್ಖಾನೆಯಲ್ಲಿ ಸುಮಾರು 30 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಮಿಕಲ್‌ ಬ್ಲಾಸ್ಟ್‌ ಆಗುವ ಸಾಧ್ಯತೆಯನ್ನರಿತ ಕಾರ್ಮಿಕರು ಬ್ಲಾಸ್ಟ್‌ ಆಗುವುದಕ್ಕೂ ಮುನ್ನವೇ ಹೊರನಡೆದಿದ್ದಾರೆ. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಬೆಂಕಿಹ ನಂದಿಸಲು ಸ್ಥಳೀಯ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇನ್ನು ಈ ಕಂಪನಿಯಲ್ಲಿ ಔಷಧಿ, ಮಾತ್ರೆಗಳಿಗೆ ಬೇಕಾದ ರಸಾಯನಿಕಗಳನ್ನು ಉತ್ಪತಿ ಮಾಡಲಾಗುತ್ತಿದ್ದು, ಇಂದು ಬೆಂಕಿ ಹೊತ್ತಿಕೊಂಡಿದ್ದು ಅಪಾರ ಪ್ರಮಾಣದ ವಸ್ತುಗಳು ನಾಶವಾಗಿದೆ ಎಂದು ವರದಿ ಆಗಿದೆ. ಘಟನೆ ಸ್ಥಳಕ್ಕೆ ತಹಶಿಲ್ದಾರರು ಸೇರಿದಂತೆ ಹಲವು ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿ ಹತೋಟಿಗೆ ಬಂದಿದ್ದು, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
 

SCROLL FOR NEXT