ರಾಜ್ಯ

ಕನಕಪುರದಲ್ಲಿ ಗೋಸಾಗಣೆ ವಾಹನದ ಮೇಲೆ ದಾಳಿ, ಓರ್ವನ ಹತ್ಯೆ: ವಿಡಿಯೋ ಹಂಚಿಕೊಂಡು ಬಿಜೆಪಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್!

Nagaraja AB

ಬೆಂಗಳೂರು: ಕನಕಪುರದ ಸಾತನೂರಿನಲ್ಲಿ ಗೋಸಾಗಣೆಯ ವಾಹನದ ಮೇಲೆ ದಾಳಿ ನಡೆಸಿ, ಓರ್ವನನ್ನು ಹತ್ಯೆ ಮಾಡಲಾಗಿದೆ. ಈ ಸಂಬಂಧ ವಿಡಿಯೋ ಮತ್ತು ಫೋಟೋವೊಂದನ್ನು ರಾಜ್ಯ ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಕೊಲೆಗಡುಕರಿಗೆ ಬಿಜೆಪಿಯ ಕೃಪಾಪೋಷಣೆ ಇರುವುದಾಗಿ ಆರೋಪಿಸಿದೆ. 

ವಾಹನದೊಳಗಡೆ ವ್ಯಕ್ತಿಯೋರ್ವ ಅಳುತ್ತಿರುವ ವಿಡಿಯೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ಸರ್ಕಾರ ಪುಂಡರನ್ನು, ರೌಡಿಗಳನ್ನು ಪೋಷಿಸಿದ್ದರ ಪರಿಣಾಮ ಈಗ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾರೆ. ಕನಕಪುರದಲ್ಲಿ ಗೋಸಾಗಣೆಯ ವಾಹನದ ಮೇಲೆ ದಾಳಿ ನಡೆಸಿ ಓರ್ವನ ಹತ್ಯೆ ಮಾಡಿದ ಕೊಲೆಗಡುಕರಿಗೆ ಬಿಜೆಪಿಯ ಕೃಪಾಪೋಷಣೆ ಇದೆ. ಬಿಜೆಪಿ ಹೇಳುತ್ತಿದ್ದ ಯುಪಿ ಮಾಡೆಲ್ ಅಕ್ಷರಶಃ ಕರ್ನಾಟಕದಲ್ಲಿ ಜರುಗುತ್ತಿದೆ ಎಂದು ಟ್ವೀಟ್ ಮಾಡಿದೆ.

ಮತ್ತೊಂದು ಟ್ವೀಟ್ ನಲ್ಲಿ  40% ಕಮಿಷನ್ ಪಡೆದು ಆರಾಮಾಗಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಕಾನೂನು ಪಾಲನೆಯ ಹೊಣೆಯನ್ನು ಪೊಲೀಸರಿಗೆ ಕೊಟ್ಟಿದ್ದೀರೋ, ಕೊಲೆಗಡುಕರಿಗೆ ಕೊಟ್ಟಿದ್ದೀರೋ? ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆಗೆ ಸರ್ಕಾರ ಹೊಣೆಯಲ್ಲವೇ? ಎಂದು ಪ್ರಶ್ನಿಸಿದ್ದು, ಬೀದಿ ಪುಂಡರನ್ನು ಆದರ್ಶ ವ್ಯಕ್ತಿಗಳು ಎಂಬಂತೆ ಮೆರೆಸುವ ಬಿಜೆಪಿ ಈ ಕೊಲೆಯ ಹೊಣೆ ಹೊರಲಿ ಎಂದು ತಾಕೀತು ಮಾಡಿದೆ. 
 

ಪೊಲೀಸರು ಈ ಪ್ರಕರಣದ ಕೂಲಂಕುಷ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

SCROLL FOR NEXT