ರಾಜ್ಯ

ಬೆಂಗಳೂರು: ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಲಾಲ್‌ಬಾಗ್‌ನಲ್ಲಿ ಜಾಗೃತಿ ಅಭಿಯಾನ

Ramyashree GN

ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರಲ್ಲಿ ತಮ್ಮ ಹಕ್ಕು ಚಲಾಯಿಸುವ ಅಗತ್ಯತೆಯ ಕುರಿತು ಜಾಗೃತಿ ಮೂಡಿಸಲು, ಶನಿವಾರ ಬೆಳಿಗ್ಗೆ ಲಾಲ್‌ಬಾಗ್‌ನಲ್ಲಿ ವಾಕಥಾನ್ ಮತ್ತು ಬೀದಿ ನಾಟಕಗಳನ್ನು ನಡೆಸಲಾಯಿತು.

ಕೆಂಗಲ್ ಹನುಮಂತಯ್ಯ ರಸ್ತೆಯ (ಡಬಲ್ ರಸ್ತೆ) ಲಾಲ್‌ಬಾಗ್ ಪೂರ್ವ ದ್ವಾರದಲ್ಲಿ ಆರಂಭವಾಗಿ  ಉದ್ಯಾನದ ಒಳಗೆ ಹೋಗಿ ಪಶ್ಚಿಮ ದ್ವಾರದಲ್ಲಿ ಕೊನೆಗೊಂಡ ವಾಕಥಾನ್‌ಗೆ ವಿಶೇಷ ಹಣಕಾಸು ಆಯುಕ್ತ ಹಾಗೂ ವಲಯ ಆಯುಕ್ತ ಜಯರಾಮ ರಾಯಪುರ ಚಾಲನೆ ನೀಡಿದರು.

ಬೆಂಗಳೂರು ದಕ್ಷಿಣದಲ್ಲಿ ಶೇ 52ರಷ್ಟು ಮತದಾನವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರಲ್ಲಿ ಜಾಗೃತಿ ಮೂಡಿಸಲು ನಾವು ಸಾಕಷ್ಟು ಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ಮತದಾನದ ಶೇಕಡಾವಾರು ಪ್ರಮಾಣವನ್ನು ಕನಿಷ್ಠ ಶೇ 60ಕ್ಕೆ ಹೆಚ್ಚಿಸಲು ನಾವು ಬಯಸುತ್ತೇವೆ. ನಾವು ವಾಕ್‌ಥಾನ್ ಮತ್ತು ಬೀದಿ ನಾಟಕಗಳ ಮೂಲಕ ಲಾಲ್‌ಬಾಗ್‌ಗೆ ವಾಕಿಂಗ್ ಮಾಡುವವರು ಮತ್ತು ಸಂದರ್ಶಕರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಜಯರಾಮ ರಾಯಪುರ ಹೇಳಿದರು.

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡುವಂತೆ ಕರೆ ನೀಡಿದ ಅವರು, ಬೆಂಗಳೂರು ದಕ್ಷಿಣ ವಲಯದ ವಿಜಯ ಕಾಲೇಜಿನಲ್ಲಿ 500ಕ್ಕೂ ಹೆಚ್ಚು ಯುವ ಮತದಾರರಿದ್ದಾರೆ. ಯುವಜನತೆ ಮೇ 10ರಂದು ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ನಾವು ಈ ಪ್ರದೇಶದ ಬಹುತೇಕ ಕಾಲೇಜುಗಳಿಗೆ ಭೇಟಿ ನೀಡುತ್ತೇವೆ. ಕಾಲೇಜುಗಳ ಜೊತೆಗೆ, ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಾವು ಕಚೇರಿಗಳು ಮತ್ತು ಇತರ ಪ್ರಮುಖ ಸ್ಥಳಗಳನ್ನೂ ಕೇಂದ್ರೀಕರಿಸುತ್ತೇವೆ ಎಂದು ರಾಯಪುರ ಹೇಳಿದರು. 

ಜಾಗೃತಿ ಕಾರ್ಯಕ್ರಮದ ವೇಳೆ ಮೇ 10ರಂದು ಜನರು ಮತದಾನ ಮಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಟ್ಟೇಗಾರಪಾಳ್ಯದಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಮತದಾನ ಜಾಗೃತಿ ಅಭಿಯಾನ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡ ವಾಕಥಾನ್ ಕೂಡ ನಡೆಸಲಾಯಿತು.

SCROLL FOR NEXT