ರಾಜ್ಯ

ಒಳಮೀಸಲಾತಿಯಿಂದಾಗಿ ಬಿಜೆಪಿ ಪಕ್ಷ ಸೋಲು ಕಂಡಿತು ಎಂಬುದು ಭ್ರಮೆ: ಗೋವಿಂದ ಕಾರಜೋಳ

Manjula VN

ಬಾಗಲಕೋಟೆ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಒಳಮೀಸಲಾತಿ ಕಾರಣ ಎನ್ನುವುದು ಭ್ರಮೆಯಷ್ಟೇ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಶುಕ್ರವಾರ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಒಳಮೀಸಲಾತಿ ಅಷ್ಟೇ ಅಲ್ಲ, ಹಲವು ಕಾರಣಗಳಿವೆ. ಚುನಾವಣೆಗೂ ಮುನ್ನ ಮಾಡಿದ ಹಲವಾರು ತಪ್ಪು ಲೆಕ್ಕಚಾಲಗಳಿಂದಾಗಿ ಸೋಲು ಅನುಭವಿಸುವಂತಾಯಿತು ಎಂದು ಹೇಳಿದರು.

ಶೋಷಿತರಿಗೆ ನ್ಯಾಯ ಕಲ್ಪಿಸುವುದಕ್ಕಾಗಿ ಒಳಮೀಸಲಾತಿ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. 72 ಮಂದಿ ಹೊಸಬರಿಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಮಾಡಿದ ಸುಳ್ಳು ಆರೋಪಗಳನ್ನು ಜನರು ನಂಬಿದ್ದು ಎಲ್ಲ ಸೇರಿ ಸೋಲಾಯಿತು. ಆದರೆ, ಒಳಮೀಸಲಾತಿಯಿಂದಲೇ ಸೋಲಾಯಿತು ಎಂದು ಕೆಲವರು ದಾರಿ ತಪ್ಪಿಸುತ್ತಿದ್ದಾರೆಂದು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಅವರು, ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಎರಡು ತಿಂಗಳಿನಲ್ಲಿಯೇ ಭ್ರಷ್ಟಾಚಾರದ ಕಮಟು ವಾಸನೆ ಹೊಡೆಯುತ್ತಿದೆ. ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದವರು, ಅಧಿಕಾರ ಸಿಕ್ಕ ಮೇಲೆ ಏನು ಮಾಡುತ್ತಿದ್ದಾರೆ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಎಲ್ಲಿದ್ದಾನೆ? ಕಾಂಗ್ರೆಸ್‌ ನಾಯಕರ ಮನೆಯಲ್ಲಿ ಅಡಗಿ ಕುಳಿತಿರಬೇಕು’ ಎಂದು ಟೀಕಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಇದರ ಬಗ್ಗೆ ಗಮನಹರಿಸುವ ಬದಲು ಅಧಿಕಾರಿಗಳನ್ನು ವರ್ಗಾವಣೆ ಮಾಡುವುದರಲ್ಲಿ ಸರ್ಕಾರ ನಿರತವಾಗಿದೆ. ‘ಹಣಕ್ಕಾಗಿ ಬೇಕಾಬಿಟ್ಟಿ ವರ್ಗಾವಣೆ ಮಾಡಲಾಗುತ್ತಿದೆ. ಶೇ 6ರಷ್ಟು ವರ್ಗಾವಣೆ ಮಾಡುವ ನಿಯಮಗಳ ಆದೇಶ ಹೊರಡಿಸಿ, ಶೇ 54ರಷ್ಟು ವರ್ಗಾವಣೆ ಮಾಡಲಾಗಿದೆ’ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಸರ್ಕಾರ ಎಸ್‌ಸಿಪಿ / ಟಿಎಸ್‌ಪಿ ಹಣವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಅನ್ನ ಭಾಗ್ಯ ಯೋಜನೆಗೆ ಮೋದಿ ಸರಕಾರ ರಾಜ್ಯಕ್ಕೆ ನೀಡುತ್ತಿರುವ ಅಕ್ಕಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನಗತ್ಯ ಪ್ರಚಾರ ಮಾಡುತ್ತಿದ್ದಾರೆಂದು ಕಿಡಿಕಾರಿದರು.

SCROLL FOR NEXT