ರಾಜ್ಯ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಂದ ದುರ್ನಡತೆ; ಒಸಿಐ ಮಹಿಳೆ ಆರೋಪ, ಕ್ಷಮೆಯಾಚನೆಗೆ ಆಗ್ರಹ

Srinivas Rao BV

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಮ್ಮೊಂದಿಗೆ ದುರ್ನಡತೆ ತೋರಿದ್ದಾರೆ ಎಂದು ಒಸಿಐ (ಭಾರತೀಯ ಮೂಲದ ವಿದೇಶಿ ಪ್ರಜೆ) ಮಹಿಳೆಯೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸೌದಿ ಅರೇಬಿಯಾದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಳಿನಿ ಮುರ್ಕುಟ್ಲ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ದೌರ್ಜನ್ಯವೆಸಗಿದ್ದು, ಅವಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ಮಹಿಳೆಯಾಗಿದ್ದು, ಘಟನೆ ನಡೆದಾಗ ತಮ್ಮೊಂದಿಗೆ 9 ವರ್ಷದ ಮಗನೂ ಇದ್ದ ಎಂದು ಹೇಳಿದ್ದಾರೆ.

ಜು.22 ರ ಮುಂಜಾನೆ ಬಹ್ರೈನ್ (ಜಿಎಫ್ 282) ಗಲ್ಫ್ ಏರ್ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ಮಹಿಳೆ ತಮ್ಮ ಸಮಸ್ಯೆಯ ಬಗ್ಗೆ ಹಲವು ವಿಭಾಗಗಳನ್ನು ಸಂಪರ್ಕಿಸಿದ್ದಾರೆ ಹಾಗೂ ದೂರು ದಾಖಲಿಸಿದ್ದಾರೆ. ಆದರೂ ಅವರ ನೆರವಿಗೆ ಯಾರೂ ಧಾವಿಸಿಲ್ಲ.

ಒಸಿಐ ಆಗಿರುವ ಕಾರಣ ನಾವು ಲ್ಯಾಂಡಿಂಗ್ ಕಾರ್ಡ್ ನ್ನು ಭರ್ತಿ ಮಾಡಬೇಕು ಹಾಗೂ ಅದನ್ನು ವಲಸೆ ಕೌಂಟರ್ ಗೆ ಹಸ್ತಾಂತರಿಸಬೇಕು. ನನ್ನ ಸರದಿ ಬಂದಾಗ ಕೌಂಟರ್ ನಲ್ಲಿದ್ದ ಮಹಿಳೆ ನನ್ನನ್ನು ಅತ್ಯಂತ ಅಸಭ್ಯ ರೀತಿಯಲ್ಲಿ, ತಿರಸ್ಕಾರ ರೀತಿಯಲ್ಲಿ ವರ್ತಿಸಿದರು. ನಾನು ಫಾರ್ಮ್ ನ್ನು ತುಂಬಿದ್ದರ ರೀತಿಯ ಬಗ್ಗೆ ಆಕ್ಷೇಪಣೆ ಹೊಂದಿದ್ದ ಆ ಮಹಿಳೆ ನನ್ನೆಡೆಗೆ ಕಿರುಚಲು ಆರಂಭಿಸಿದರು. ಬೇರೊಬ್ಬರ ಫಾರ್ಮ್ ನ್ನು ತೆಗೆದುಕೊಂಡು ನಾನು ನನ್ನದನ್ನು ಹೇಗೆ ತುಂಬಿಸಿದ್ದೇನೆ ಎಂದು ನೋಡಲು ಹೇಳಿದರು. 

"ಇದು ಅಸಹ್ಯಕರ ನಡವಳಿಕೆಯಾಗಿದ್ದು ಅದು ನನಗೆ ಅವಮಾನವನ್ನುಂಟುಮಾಡಿತು. ಕೌಂಟರ್ ನಲ್ಲಿದ್ದ ಮಹಿಳೆ ಇನ್ನೊಂದು ಫಾರ್ಮ್ ತುಂಬಿ ತರುವಂತೆ ಆಜ್ಞಾಪಿಸಿದಳು. ನನಗೆ ಮುಖ್ಯೋಪಾಧ್ಯಾಯರ ಮುಂದೆ ನಿಂತ ತುಂಟ  ವಿದ್ಯಾರ್ಥಿಯಂತೆ ಭಾಸವಾಯಿತು" ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೌಂಟರ್ ನಲ್ಲಿದ್ದ ಮಹಿಳೆ ವಿನಮ್ರವಾಗಿ ನಡೆದುಕೊಳ್ಳಬಹುದಿತ್ತು. ನಿನ್ನನ್ನೇಕೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ನನ್ನ ಮಗ ಪ್ರಶ್ನಿಸಿದ ಎಂದು ಹೇಳಿರುವ ನಳಿನಿ, ತಾವು ಭೇಟಿ  ನೀಡಲಿದ್ದ ಜಯನಗರದಲ್ಲಿರುವ ತಮ್ಮ ಸಹೋದರನ ವಿಳಾಸವನ್ನು ಸರಿಯಾಗಿ ನಮೂದಿಸಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. "ನಾನು ರಾತ್ರಿಯ ನಿದ್ರೆಯಿಲ್ಲದೆ ದಣಿದಿದ್ದೆ ಮತ್ತು ಆ ಫಾರ್ಮ್ ನ್ನು ತ್ವರಿತವಾಗಿ ತುಂಬಿದ್ದೆ" ಎಂದು ಅವರು ಹೇಳಿದರು.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಲಸೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿದ್ದು, ಘಟನೆ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. 

SCROLL FOR NEXT