ರಾಜ್ಯ

ಹಾಸನ: ಪೋಷಕರಿಗೆ ವಿಷ ನೀಡಿ ಹತ್ಯೆಗೈದ ಆರೋಪದ ಮೇಲೆ 27 ವರ್ಷದ ಯುವಕನ ಬಂಧನ

Ramyashree GN

ಹಾಸನ: ಹಾಸನ ಜಿಲ್ಲೆಯಲ್ಲಿ ಪೋಷಕರಿಗೆ ವಿಷ ನೀಡಿ ಕೊಂದಿದ್ದ ಆರೋಪದ ಮೇಲೆ ಯುವಕನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಆರೋಪಿಯನ್ನು ಅರಕಲಗೂಡು ತಾಲೂಕಿನ ಬಿಸಿಲಹಳ್ಳಿ ನಿವಾಸಿ 27 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಕೊಲೆಯಾದವರನ್ನು ತಂದೆ ನಂಜುಂಡಪ್ಪ (55) ಮತ್ತು ತಾಯಿ ಉಮಾ (48) ಎನ್ನಲಾಗಿದೆ.

ಪೊಲೀಸರ ಪ್ರಕಾರ, ಮಂಜುನಾಥ್ ಆಗಸ್ಟ್ 15ರಂದು ತನ್ನ ಪೋಷಕರ ಆಹಾರದಲ್ಲಿ ಕೀಟನಾಶಕವನ್ನು ಬೆರೆಸಿದ್ದ. ಆಹಾರ ಸೇವಿಸಿದ ಬಳಿಕ ದಂಪತಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕೆಲವು ದಿನಗಳ ನಂತರ ಮನೆಗೆ ಮರಳಿದ್ದರು.

ಆದರೆ, ಆಗಸ್ಟ್ 23 ರಂದು ನಂಜುಂಡಪ್ಪ ಮತ್ತು ಉಮಾ ಹಠಾತ್ ನಿಧನರಾದರು.

ಮೂಲಗಳ ಪ್ರಕಾರ, ಕೀಟನಾಶಕ ಸೇವನೆಯಿಂದ ಆ ಅಂಶವು ಕರುಳಿನಲ್ಲಿ ವಾರಗಳವರೆಗೆ ಉಳಿಯಬಹುದು ಮತ್ತು ನಂತರದ ದಿನಗಳಲ್ಲಿ ಸಾವು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ದಂಪತಿಯ ಎರಡನೇ ಪುತ್ರನಾಗಿರುವ ಮಂಜುನಾಥ್ ಎಂಬಾತ ವಿಧವೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಹಣ ದುರುಪಯೋಗ ಮಾಡಿಕೊಂಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ವಿಷಯ ತಿಳಿದು ಅವರ ತಾಯಿ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ತಮ್ಮಿಂದ ತೆಗೆದುಕೊಂಡ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಕೃತ್ಯ ಎಸಗಿದ್ದಾನೆ.

ಅಧಿಕಾರಿಗಳಿಗೆ ಮಾಹಿತಿ ನೀಡದೆಯೇ ಮಂಜುನಾಥ್ ಮೃತ ತಂದೆ-ತಾಯಿಯ ಅಂತ್ಯಸಂಸ್ಕಾರಕ್ಕೆ ಯತ್ನಿಸಿದ್ದಾನೆ. ಆದರೆ, ದಂಪತಿಯ ಇನ್ನೊಬ್ಬ ಮಗ ತನ್ನ ಹೆತ್ತವರ ಹಠಾತ್ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅಸಹಜ ಸಾವು ಎಂದು ಹೇಳಲಾಗಿದೆ.

ಪೊಲೀಸರು ವಿಚಾರಣೆ ನಡೆಸಿದಾಗ, ಮಂಜುನಾಥ್ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ನಂತರ ಆತನನ್ನು ಬಂಧಿಸಲಾಗಿದೆ.

SCROLL FOR NEXT