ರಾಜ್ಯ

ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಿಸಿ, ಇಲ್ಲವೇ ಬಂದ್ ಮಾಡಿ; ಸರ್ಕಾರಕ್ಕೆ ಎಂಎಲ್‌ಸಿಗಳ ಆಗ್ರಹ

Manjula VN

ಬೆಳಗಾವಿ: ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಿಸಿ ಇಲ್ಲವೇ, ಶಾಲೆಗಳನ್ನೇ ಬಂದ್ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಎಂಎಲ್‌ಸಿಗಳು ಆಗ್ರಹಿಸಿದರು.

ವಿಧಾನಪರಿಷತ್  ನಲ್ಲಿ ಶಿಕ್ಷಕರ ಕೊರತೆ ಎದುರಿಸುತ್ತಿರುವ ರಾಜ್ಯದ ಅನುದಾನಿತ ಶಾಲೆಗಳ ಜ್ವಲಂತ ಸಮಸ್ಯೆಗಳ ಕುರಿತು ಪಕ್ಷಾತೀತವಾಗಿ ಎಂಎಲ್‌ಸಿಗಳು ಪ್ರಸ್ತಾಪಿಸಿದರು.

ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ ಸರ್ಕಾರ ಅನುಮತಿ ನೀಡಬೇಕು ಇಲ್ಲವೇ ಶಾಲೆಗಳನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಶಿಕ್ಷಕರ ಕೊರತೆ ಇರುವ ಅನುದಾನಿತ ಶಾಲೆ ನಡೆಸುವುದರಿಂದ ಪ್ರಯೋಜನವೇನಿದೆ? ಕೆಲವು ಅನುದಾನಿತ ಶಾಲೆಗಳಲ್ಲಿ ಸುಮಾರು ನೂರು ವಿದ್ಯಾರ್ಥಿಗಳಿದ್ದು, ಒಬ್ಬರೇ ಶಿಕ್ಷಕರಿದ್ದಾರೆ. ಸರ್ಕಾರವು ಈ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಅವಕಾಶ ನೀಡುತ್ತಿಲ್ಲ ಆದರೆ ಶಾಲೆಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಮಾತ್ರ ಬಯಸುತ್ತಿದೆ. ಸಮರ್ಪಕ ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ' ಎಂದು ಕಾಂಗ್ರೆಸ್ ಎಂಎಲ್ ಸಿ ಅಬ್ದುಲ್ ಜಬ್ಬಾರ್ ಅವರು ಪ್ರಶ್ನಿಸಿದರು.

ಪರಿಷತ್‌ನಲ್ಲಿ ಶಿಕ್ಷಕರ ಕೊರತೆ ಕುರಿತು ಚರ್ಚೆ ನಡೆಸಿದ ಬಿಜೆಪಿ ಎಂಎಲ್‌ಸಿ ಶಶೀಲ್ ನಮೋಶಿ ಅವರು, 2016ರಿಂದ ಖಾಲಿ ಇರುವ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಶಿಕ್ಷಕರಿಲ್ಲದ ಕಾರಣ ಈ ಶಾಲೆಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಶಿಕ್ಷಕರಿಗೆ ಕೇವಲ 5ರಿಂದ 6 ಸಾವಿರ ವೇತನ ನೀಡಲಾಗುತ್ತಿದ್ದು, ಹೆಚ್ಚಿನ ವೇತನ ನೀಡಲು ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ನೇಮಕಾತಿ ವಿಳಂಬದಿಂದಾಗಿ ಅನೇಕ ಜನರು ಸರ್ಕಾರಿ ಉದ್ಯೋಗ ಪಡೆಯಲು ಅರ್ಹತೆಯ ವಯಸ್ಸನ್ನು ದಾಟುತ್ತಿದ್ದಾರೆ. ಈ ದಯನೀಯ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರವು ಶಿಕ್ಷಕರ ನೇಮಕಾತಿಗೆ ಅವಕಾಶ ನೀಡಬೇಕು ಅಥವಾ ಈ ಶಾಲೆಗಳನ್ನು ಮುಚ್ಚಬೇಕು, ಇವುಗಳ ಬದಲಿಗೆ ಸರ್ಕಾರಿ ಶಾಲೆಗಳನ್ನು ತೆರೆಯಬೇಕು' ಎಂದು ಆಗ್ರಹಿಸಿದರು.

SCROLL FOR NEXT