ರಾಜ್ಯ

ಬಿಜೆಪಿ ಮುಖಂಡನ ಮೇಲೆ ಹಲ್ಲೆ ಪ್ರಕರಣ: ತನಿಖೆಗೆ ಸೂಚಿಸಲಾಗಿದೆ ಎಂದ ಗೃಹ ಸಚಿವ ಪರಮೇಶ್ವರ್

Manjula VN

ಬೆಳಗಾವಿ: ‘ಬಿಜೆಪಿ ಮುಖಂಡ ಪೃಥ್ವಿಸಿಂಗ್‌ ಅವರ ಮೇಲೆ ಹಲ್ಲೆ ನಡೆದ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡಿ ವರದಿ ನೀಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಂಗಳವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡನ ಮೇಲೆ ಹಲ್ಲೆ ನಡೆದಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. "ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಪರಿಶೀಲಿಸಿ ಮಾಹಿತಿ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಘಟನೆಯ ಬಗ್ಗೆ ಅಧಿಕಾರಿಗಳಿಂದ ಎಲ್ಲಾ ವಿವರಗಳನ್ನು ಪಡೆದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಸುವರ್ಣಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಗೂಂಡಾಗಿರಿ ಹೆಚ್ಚಾಗುತ್ತದೆ. ಶಿವಮೊಗ್ಗದಲ್ಲೂ ಹಿಂಸಾತ್ಮಕ ಘಟನೆಗಳನ್ನು ನೋಡಿದ್ದೇವೆ. ಇಂತಹ ಹಿಂಸಾತ್ಮಕ ಘಟನೆಗಳೆಲ್ಲವೂ ಕಾಂಗ್ರೆಸ್ ಪ್ರಾಯೋಜಿತವಾಗಿರುವಂತೆ ತೋರುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ರಾಜ್ಯ ಬಿಜೆಪಿ ಮುಖ್ಯಸ್ಥ ಬಿ.ವೈ.ವಿಜಯೇಂದ್ರ ಅವರು ಪೃಥ್ವಿ ಅವರನ್ನು (ಆಸ್ಪತ್ರೆಯಲ್ಲಿ) ಭೇಟಿ ಮಾಡಿದ್ದು, ನಾನು ಕೂಡ ಅಲ್ಲಿಗೆ ಹೋಗುತ್ತಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಾಂಗ್ರೆಸ್ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

SCROLL FOR NEXT