ರಾಜ್ಯ

ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿದ ನಂತರ ಮೋಡ ಬಿತ್ತನೆ ಕುರಿತು ನಿರ್ಧಾರ: ಡಿಸಿಎಂ ಡಿಕೆಶಿ

Lingaraj Badiger

ಬೆಳಗಾವಿ: ರಾಜ್ಯದಲ್ಲಿ ತೀವ್ರ ಬರಗಾಲ ಇರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಪ್ರಸ್ತಾವನೆಯನ್ನು ಪರಿಗಣಿಸಲು ತಮ್ಮ ಸರ್ಕಾರ ಸಿದ್ಧವಿದೆ ಮತ್ತು ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.

ರಾಜ್ಯ ಸರ್ಕಾರ ಒಟ್ಟು 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.

ಇಂದು ವಿಧಾನಸಭೆ ಶೂನ್ಯವೇಳೆಯಲ್ಲಿ ಮೋಡ ಬಿತ್ತನೆ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ್ ಅವರ ಪ್ರಶ್ನೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ರೀತಿ ಉತ್ತರ ನೀಡಿದ್ದಾರೆ. 

ಬೇರೆ ರಾಜ್ಯಗಳಲ್ಲಿ ಮೋಡ ಬಿತ್ತನೆ ಮಾಡಲಾಗಿದೆ. ಈ ಹಿಂದೆ ನಮ್ಮ ರಾಜ್ಯದಲ್ಲೂ ಈ ಪ್ರಯೋಗವಾಗಿತ್ತು. ನಮ್ಮ ಶಾಸಕರಾದ ಪ್ರಕಾಶ್ ಅವರ ಕ್ಷೇತ್ರದಲ್ಲಿ ಮೋಡ ಬಿತ್ತನೆಯ ಪ್ರಯತ್ನಗಳು ಉತ್ತಮ ಫಲಿತಾಂಶ ನೀಡಿವೆ ಎಂದು ನನಗೆ ತಿಳಿಸಲಾಗಿದೆ. ನಮ್ಮ ಸರ್ಕಾರವೂ ಮೋಡ ಬಿತ್ತನೆಗೆ ಸಕಾರಾತ್ಮಕ ಭಾವನೆ ಹೊಂದಿದೆ ಎಂದರು.

ಮೋಡ ಬಿತ್ತನೆಯ ವೆಚ್ಚವು ಸುಮಾರು 50 ಲಕ್ಷದಿಂದ 1 ಕೋಟಿ ಎಂದು ಹೇಳಲಾಗುತ್ತದೆ. ನಾನು ಈ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ನಾನು ಹವಾಮಾನ ತಜ್ಞರು ಮತ್ತು ವಿಜ್ಞಾನಿಗಳೊಂದಿಗೆ ಮಾತನಾಡಿದ್ದೇನೆ. ಅವರು ಮುಂದಿನ ಕೆಲವು ದಿನಗಳು ಮೋಡ ಬಿತ್ತನೆಗೆ ಒಳ್ಳೆಯ ಅವಕಾಶ ಇದೆ ಎಂದು ಹೇಳಿರುವುದಾಗಿ ಪ್ರಕಾಶ್ ಕೋಳಿವಾಡ್ ಅವರು ಹೇಳಿದರು.

SCROLL FOR NEXT