ರಾಜ್ಯ

ಬೆಂಗಳೂರು ಟೆಕ್ಕಿಗಳೇ ಹುಷಾರ್, ಸಂಚಾರ ನಿಯಮ ಅನುಸರಿಸಿ, ಇಲ್ಲವೇ ನಿಮ್ಮ ಸಂಸ್ಥೆಗೆ ದೂರು!

Nagaraja AB

ಬೆಂಗಳೂರು: ನಗರದ ಟೆಕ್ಕಿಗಳೇ ಹುಷಾರ್.. ನೀವು ರಸ್ತೆಗಳಲ್ಲಿ ಟ್ರಾಫಿಕ್ ಸಿಗ್ನಲ್‌ ಜಂಪ್ ಮಾಡುವ ಮೊದಲು ಅಥವಾ ವೇಗದ ಮಿತಿ ಮೀರುವ ಮೊದಲು ಎರಡು ಬಾರಿ ಯೋಚಿಸಿ, ಏಕೆಂದರೆ ನೀವು ಯಾವುದೇ ಸಂಚಾರಿ ನಿಯಮ ಉಲ್ಲಂಘಿಸಿದ್ದರೆ ಟ್ರಾಫಿಕ್ ಪೊಲೀಸರು ಅದರ ಬಗ್ಗೆ ನೇರವಾಗಿ ನಿಮ್ಮ ಕಂಪನಿಗೆ ದೂರು ನೀಡುತ್ತಾರೆ. 

ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೂರ್ವ ವಿಭಾಗದ ಸಂಚಾರ ಪೊಲೀಸರು  ಈ ವಾರ ನಗರದ ಹೊರವರ್ತುಲ ರಸ್ತೆ ಮತ್ತು ವೈಟ್‌ಫೀಲ್ಡ್ ಐಟಿ ಕಾರಿಡಾರ್‌ನಲ್ಲಿ ಪ್ರಾಯೋಗಿಕವಾಗಿ ಈ ವಿಶಿಷ್ಟವಾದ ಅಭಿಯಾನವನ್ನು ಆರಂಭಿಸಿದೆ. ಸದ್ಯಕ್ಕೆ ಸಂಚಾರ ಪೂರ್ವ ವಿಭಾಗದಲ್ಲಿ ಮಾತ್ರ ಇದಕ್ಕೆ ನೀಡಲಾಗಿದೆ, ಆದರೆ ಮಾರ್ಗದುದ್ದಕ್ಕೂ ಸಂಚಾರ ನಿಯಮ ಉಲ್ಲಂಘನೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದರೆ, ಬೆಂಗಳೂರಿನ ಇತರ ಪ್ರಮುಖ ಭಾಗಗಳಿಗೂ ವಿಸ್ತರಿಸಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಗಮನಾರ್ಹ ಸಂಖ್ಯೆಯ ಸಂಚಾರ ನಿಯಮ ಉಲ್ಲಂಘನೆ ಗಮನಿಸಿದ ನಂತರ ನಿರ್ದಿಷ್ಟ ಸಂಚಾರ ವಿಭಾಗದ ವ್ಯಾಪ್ತಿಯಲ್ಲಿ ಇದನ್ನು ಆರಂಭಿಸಲಾಗಿದೆ. ವಿಶೇಷವಾಗಿ ಟೆಕ್ಕಿಗಳು ತಾವು ತಲುಪಬೇಕಾದ ಸ್ಥಳವನ್ನು ವೇಗವಾಗಿ ತಲುಪುವ ಪ್ರಯತ್ನದಲ್ಲಿ ಟ್ರಾಫಿಕ್ ಸಿಗ್ನಲ್‌ ಜಂಪ್ ಮಾಡುವ ಅಥವಾ ವೇಗದ ಮಿತಿಗಳನ್ನು ಮೀರುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹಿರಿಯ ಸಂಚಾರ ಅಧಿಕಾರಿ ಹೇಳಿದರು.

ಬೆಂಗಳೂರಿನ ಪೂರ್ವ ವಿಭಾಗದಲ್ಲಿ ಪ್ರಾಯೋಗಿಕವಾಗಿ ಈ ಅಭಿಯಾನ ಪ್ರಾರಂಭಿಸಿದ್ದೇವೆ. ಹಾಗಾಗಿ, ಯಾವುದೇ ಐಟಿ ಕಂಪನಿಯ ಉದ್ಯೋಗಿಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ, ಅವರ ಕಂಪನಿಗಳಿಗೆ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಮಾಹಿತಿ ಕಳುಹಿಸಲಾಗುತ್ತದೆ. ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅವರಿಗೆ ಹೆಚ್ಚು ಅರಿವು ಮೂಡಿಸಲು ಮತ್ತು ಜಾಗೃತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು  ಪೂರ್ವ ವಿಭಾಗ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಹೇಳಿದರು. 

ಸಂಚಾರ ನಿಯಮ ಉಲ್ಲಂಘಿಸುವವರ ಕಂಪನಿಯನ್ನು ಪರಿಶೀಲಿಸಲು ವ್ಯಕ್ತಿಯ ಗುರುತಿನ ಚೀಟಿಯನ್ನು ಟ್ರಾಫಿಕ್ ಪೊಲೀಸರು ಪರಿಶೀಲಿಸುತ್ತಾರೆ. ನಂತರ ಟೆಕ್ ಕಂಪನಿಗಳೊಂದಿಗೆ ಸಂಪರ್ಕ ಬೆಳೆಸಿ ಸಂಚಾರ ನಿಯಮ ಉಲ್ಲಂಘನೆಯ ಮಾಹಿತಿ ನೀಡುತ್ತಾರೆ. ಟೆಕ್ ಕಂಪನಿಗಳು ತಮ್ಮ ಸಂಸ್ಥೆಗಳಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ಜಾಗೃತಿ ಅಭಿಯಾನಗಳನ್ನು ಆಯೋಜಿಸಲು ಅಥವಾ ಸಂಚಾರ ನಿಯಮಗಳ ಕುರಿತು ಮಾಹಿತಿ ನೀಡಲು ಪೊಲೀಸರನ್ನು ಆಹ್ವಾನಿಸಲು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.

SCROLL FOR NEXT