ಬೆಂಗಳೂರು: ನೈಸ್ ರಸ್ತೆಯ ಟೋಲ್ ಬಳಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಮೃತರನ್ನು ಕನಕಪುರ ರಸ್ತೆಯ ಚುಂಚಘಟ್ಟದ ಮಂಜುನಾಥ್ (55) ಹಾಗೂ ಕಾರು ಚಾಲಕ ನವೀನ್ (34) ಎಂದು ಗುರ್ತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್ ಅವರ ಪತ್ನಿ ಹೇಮಲತಾ, ಮಕ್ಕಳಾದ ಕೃತಿಕಾ (20) ಮತ್ತು ಪುತ್ರ ಪ್ರಜ್ವಲ್ (15) ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಜುನಾಥ್ ಮತ್ತು ಅವರ ಕುಟುಂಬ ರಜೆ ಹಿನ್ನೆಲೆಯಲ್ಲಿ ಮಂಗಳೂರಿಗೆ ತೆರಳಿದ್ದರು, ಮಂಗಳವಾರ ಬೆಳಗ್ಗೆ ಮನೆಗೆ ಮರಳುತ್ತಿದ್ದರು ಎನ್ನಲಾಗಿದೆ.
ಕಾರು ಚಲಾಯಿಸುತ್ತಿದ್ದ ನವೀನ್ ನಿದ್ರೆಗೆ ಜಾರಿದ್ದು, ಈ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಇತರ ವಾಹನ ಸವಾರರು ರಕ್ಷಣೆಗೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.