ರಾಜ್ಯ

ಹೊಸ ವರ್ಷಾಚರಣೆ: ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

Manjula VN

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಅನುಕೂಲ ಆಗುವಂತೆ ಡಿ.31ರಂದು ಮೆಟ್ರೊ ರೈಲು ಸಂಚಾರವನ್ನು ರಾತ್ರಿ 2 ಗಂಟೆ ವರೆಗೆ ವಿಸ್ತರಿಸಲಾಗಿದೆ. ಆದರೆ, ಈ ಹೆಚ್ಚುವರಿ ಅವಧಿಯಲ್ಲಿ ಎಂ.ಜಿ. ರಸ್ತೆ ನಿಲ್ದಾಣವನ್ನು ತೆರೆಯದಂತೆ ಪೊಲೀಸ್‌ ಇಲಾಖೆ ಸೂಚಿಸಿದೆ.

ಪ್ರತಿ ದಿನ ರಾತ್ರಿ 11.30ಕ್ಕೆ ಇದ್ದ ಕೊನೆಯ ರೈಲು ಸೇವೆಯನ್ನು ಡಿ.31ರಂದು ರಾತ್ರಿ 2 ಗಂಟೆ ತನಕ ವಿಸ್ತರಿಸಲಾಗಿದೆ. ಈ ಸಂದರ್ಭದಲ್ಲಿ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ಸುರಕ್ಷತೆಯ ದೃಷ್ಟಿಯಿಂದ ರಾತ್ರಿ 11.30ರ ನಂತರ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣ ಪ್ರವೇಶ ನಿರ್ಬಂಧಿಸಬೇಕು ಎಂದು ಪೊಲೀಸ್‌ ಇಲಾಖೆ ಸೂಚಿಸಿರುವುದರಿಂದ ಅಂದು ಹೆಚ್ಚುವರಿ ಅವಧಿಯಲ್ಲಿ ಎಂ.ಜಿ.ರಸ್ತೆಯಿಂದ ಪ್ರಯಾಣ ಬೆಳೆಸುವ ಮೆಟ್ರೊ ಪ್ರಯಾಣಿಕರು ಟ್ರಿನಿಟಿ ಅಥವಾ ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣಗಳಿಗೆ ತೆರಳಿ ಸಂಚಾರ ಮಾಡಬಹುದು ಎಂದು ಸೂಚಿಸಿದೆ.

ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ ₹ 50 ಮೊತ್ತದ ಕಾಗದದ ಟಿಕೆಟ್ ವಿತರಿಸಲಾಗುವುದು. ಕಾಗದದ ಟಿಕೆಟ್‌ಗಳನ್ನು ಅಂದು ಮುಂಚಿತವಾಗಿಯೇ ಪಡೆಯಬೇಕು. ಮಧ್ಯರಾತ್ರಿ ಟಿಕೆಟ್‌ ವಿತರಣೆ ಇರುವುದಿಲ್ಲ. ಸ್ಮಾರ್ಟ್‌ ಕಾರ್ಡ್ ಮತ್ತು ಕ್ಯೂಆರ್‌ ಕೋಡ್ ಟಿಕೆಟ್‌ ಹೊಂದಿರುವ ಪ್ರಯಾಣಿಕರು ಎಂದಿನಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಎಂ.ಜಿ. ರಸ್ತೆಗೆ ಹೊಂದಿಕೊಂಡಿರುವ ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಪಕ್ಕದಲ್ಲೇ ಇರುವ ಮೆಟ್ರೋ ನಿಲ್ದಾಣದಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಈ ಸಮಸ್ಯೆ ತಪ್ಪಿಸಲು ಪೊಲೀಸ್‌ ಇಲಾಖೆ ಈ ಕ್ರಮ ಕೈಗೊಂಡಿದೆ.

SCROLL FOR NEXT