ರಾಜ್ಯ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚದಿರಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ

Manjula VN

ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್)ಯನ್ನು ಮುಚ್ಚಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಅವರು, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಬಲವಾಗಿ ಖಂಡಿಸುತ್ತೇನೆ. ಈ ಜನ ವಿರೋಧಿ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಕಾರ್ಖಾನೆ ಸ್ಥಗಿತವು 20 ಸಾವಿರ ಮಂದಿಯ ಜೀವನವನ್ನು ಕಸಿದುಕೊಳ್ಳುವುದು ಮಾತ್ರವಲ್ಲ ರಾಜ್ಯದ ಏಕೈಕ ಸರ್ಕಾರಿ ಉಕ್ಕಿನ ಕಾರ್ಖಾನೆ ಇಲ್ಲದಂತೆ ಮಾಡಲಿದೆ. ಕಾರ್ಖಾನೆ ಪುನಶ್ಚೇತನಗೊಳಿಸಲು ಅನುವಾಗುವಂತೆ ನಮ್ಮ ಸರ್ಕಾರ 150 ಎಕರೆ ಗಣಿ ಜಾಗ ನೀಡಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಖಾನೆಯನ್ನೇ ಇಲ್ಲದಂತೆ ಮಾಡಲು ಹೊರಟಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.

3 ವರ್ಷದಿಂದ ಈಚೆಗೆ 13 ಸಾರ್ವಜನಿಕ ಸಂಸ್ಥೆಗಲನ್ನು ಮುಚ್ಚಿದ್ದೀರಿ. 37 ಸಂಸ್ಥೆಗಳು ರೂ.6,103 ಕೋಟಿ ನಷ್ಟದಲ್ಲಿ ನಡೆಯುತ್ತಿದ್ದು, ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ನಾಗಮೋಹನ್ ದಾಸ್ ವರದಿ ಪ್ರಕಾರ ಶೇ.2ರಷ್ಟು ಮಾತ್ರ ಸರ್ಕಾರಿ ಉದ್ಯೋಗಗಳಿದ್ದು, ಸರ್ಕಾರಿ ಉದ್ಯೋಗಗಳಿಂದ ಮಾತ್ರ ಎಸ್ಸಿ, ಎಸ್ಟಿ ಮೀಸಲಾತಿ ಸಾಧ್ಯ. ಇದೀಗ ಒಂದೊಂದಾಗಿ ಸಾರ್ವಜನಿಕ ಸಂಸ್ಥೆಗಲನ್ನು ಮುಚ್ಚುತ್ತಾ ಬಂದರೆ ಪರಿಶಿಷ್ಟರ ಉದ್ಯೋಗಾವಕಾಶ ಕಸಿದುಕೊಂಡಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

2018ರ ಬಿಜೆಪಿ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿನ ಎಲ್ಲಾ ನೆನೆಗುದಿಗೆ ಬಿದ್ದಿರುವ ಉಕ್ಕಿನ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುತ್ತೇವೆಂದು ಹೇಳಿದ್ದಿರಿ. ಆದರೆ, ಇರುವ ಒಂದು ಕಾರ್ಖಾನೆಯನ್ನೂ ಮುಚ್ಚಿತ್ತಿರುವುದು ಯಾಕೆ? ಈ ಭಾಗದ ಜನ ಬಿಜೆಪಿಗೆ ಬೆಂಬಲ ನೀಡಿದ್ದರು. ಅವರ ಹಿತ ರಕ್ಷಿಸಲು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ವಿಫಲವಾಗಿದ್ದಾರೆ. ನಿಮ್ಮ ಬಳಿ ರಾಜ್ಯದ ಪ್ರತಿ ಹಕ್ಕನ್ನೂ ಹೋರಾಟದ ಮೂಲಕ ಪಡೆಯುವಂತಾಗಿದೆ. ಕರ್ನಾಟಕ ನಾಗರೀಕರನ್ನು ಯಾಕೆ ದ್ವಿತೀಯ ದರ್ಜೆಯವರಂತೆ ಕಾಣುತ್ತೀರಿ ಎಂದು ಕಿಡಿಕಾರಿದ್ದಾರೆ.

SCROLL FOR NEXT