ರಾಜ್ಯ

ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಟಿಕೆಟ್ ನೀಡಬೇಡಿ: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್

Ramyashree GN

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಟಿಕೆಟ್ ನೀಡದೆ ನಿಸ್ವಾರ್ಥ ಕೆಲಸ ಮಾಡುವವರನ್ನು ಆಯ್ಕೆ ಮಾಡಿ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಪತ್ರ ಬರೆದಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರಿಗೆ ಪತ್ರ ಬರೆದು, ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ. 

ಗಾಂಧಿ ಸ್ಮಾರಕ ವೂಡೇ ಕೃಷ್ಣಾದ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಪಾಟೀಲ್ ಅವರು, ಶೇ 43ರಷ್ಟು ಲೋಕಸಭಾ ಸದಸ್ಯರು ಮತ್ತು ಶೇ 27ರಷ್ಟು ಶಾಸಕರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಅಪರಾಧ ಹಿನ್ನೆಲೆಯುಳ್ಳವರು ದೇಶ ಮತ್ತು ರಾಜ್ಯವನ್ನು ನಡೆಸುತ್ತಿರುವುದು ಪ್ರಜಾಪ್ರಭುತ್ವದಲ್ಲಿ ಕಪ್ಪು ಚುಕ್ಕೆಯಾಗಿದೆ ಎಂದಿದ್ದಾರೆ.

ಅಂತಹ ಹಿನ್ನೆಲೆಯುಳ್ಳ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಂಎಲ್ಎ ಅಥವಾ ಎಂಪಿ ಅಧಿಕಾರವನ್ನು ಬಳಸುತ್ತಾರೆ. ಇದರಿಂದ ಜನಸಾಮಾನ್ಯರಿಗೂ ತೊಂದರೆಯಾಗುತ್ತದೆ. ಅಂತಹವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಎಲ್ಲ ರಾಜಕೀಯ ಪಕ್ಷದ ಮುಖಂಡರು ಪ್ರತಿಜ್ಞೆ ಮಾಡಬೇಕು ಎಂದು ನ್ಯಾ. ಪಾಟೀಲ ಹೇಳಿದ್ದಾರೆ.

SCROLL FOR NEXT