ರಾಜ್ಯ

ಬೆಂಗಳೂರು: ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ವಿರೋಧಿಸಿ ನಾಗರಿಕರ ಪ್ರತಿಭಟನೆ ಮುಂದುವರಿಕೆ 

Nagaraja AB

ಬೆಂಗಳೂರು: ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಹಾಗೂ ರಸ್ತೆ ವಿಸ್ತರಣೆಯನ್ನು ವಿರೋಧಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳು, ಭಾನುವಾರ ಕಪ್ಪು ಬಟ್ಟೆ ಧರಿಸಿ, ಕೆರೆಯೊಂದಿಗೆ ಸೆಲ್ಫಿ ತೆಗೆದು 'ಸ್ಯಾಂಕಿ ಉಳಿಸಿ' ಹ್ಯಾಷ್ ಟ್ಯಾಗ್ ನೊಂದಿಗೆ ಸಾಮಾಜಿಕ  ಜಾಲತಾಣಗಳಲ್ಲಿ ಫೋಸ್ಟ್  ಮಾಡಿದರು.

ಫ್ಲೈಓವರ್ ಟ್ರಾಫಿಕ್ ಸಮಸ್ಯೆ ಪರಿಹರಿಸುವುದಿಲ್ಲ ಮತ್ತು ಸ್ಯಾಂಕಿ ಕೆರೆ ಉದ್ದಕ್ಕೂ ಇರುವ ಮರಗಳನ್ನು ಮಾತ್ರ ನಾಶಪಡಿಸುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ನಾಗರಿಕರಲ್ಲಿ ಮಕ್ಕಳೂ ಸಹ ಕಪ್ಪು ಬಟ್ಟೆ ಧರಿಸಿ ಒಗ್ಗಟ್ಟು ಪ್ರದರ್ಶಿಸಿದರು. ಅವರು ಮುಂಜಾನೆ ಸ್ಯಾಂಕಿ ಕೆರೆಯಿಂದ  ಸ್ಯಾಂಕಿ ಟ್ಯಾಂಕ್ ಉದ್ದಕ್ಕೂ ನಡೆದು, ಮೇಲ್ಸೇತುವೆ ನಿರ್ಮಾಣದ ವಿರುದ್ಧ  ಪ್ರತಿಭಟಿಸಿದರು.

ಮಲ್ಲೇಶ್ವರಂ ನಿವಾಸಿ, ನಟಿ- ಗಾಯಕಿ ವಸುಂಧರಾ ದಾಸ್ ಕೂಡಾ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಮೇಲ್ಸೇತುವೆ ನಿರ್ಮಾಣಕ್ಕಾಗಿ ಅನೇಕ ಮರಗಳನ್ನು ಕಡಿಯಬೇಕಾಗುತ್ತದೆ. ಇದಕ್ಕೆ ಇಲ್ಲಿನ ನಿವಾಸಿಗಳ ವಿರೋಧವಿದೆ ಎಂದು  ವಸುಂಧರಾ ದಾಸ್ ಹೇಳಿದರು. 

ಬಿಬಿಬಿಎಂಪಿ ಮತ್ತಿತರ ಆಡಳಿತ ನಿರ್ಣಯ ಕೈಗೊಳ್ಳುವವರು ಸಾರ್ವಜನಿಕರೊಂದಿಗೆ ಸರಣಿ ಸಮಾಲೋಚನೆ ನಡೆಸಿ, ಜನರ ಹಿತರಕ್ಷಣೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಮೇಲ್ಸೇತುವೆ ನಿರ್ಮಾಣಕ್ಕೆ ಬದಲಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ನಿವಾಸಿಗಳು ಒತ್ತಾಯಿಸಿದರು. 
 

SCROLL FOR NEXT