ರಾಜ್ಯ

ಹಾಸನ: ರೈತರು ತೋಡಿದ್ದ ಖೆಡ್ಡಾಕ್ಕೆ ಬಿದ್ದ ಆನೆ ಮರಿ, ರಕ್ಷಿಸಿದ ಅರಣ್ಯ ಸಿಬ್ಬಂದಿ

Lingaraj Badiger

ಹಾಸನ: ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ಗ್ರಾಮದ ಬಳಿ ಸೋಮವಾರ ಗ್ರಾಮದ ರೈತರು ತೋಡಿದ್ದ ಖೆಡ್ಡಾಕ್ಕೆ ಬಿದ್ದ ಏಳು ವರ್ಷದ ಆನೆ ಮರಿಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. 

ಆಹಾರ ಹುಡಿಕಿಕೊಂಡು ಬಂದಿದ್ದ ಆನೆ ಮರಿ ರೈತರು ತೋಡಿದ ಕಂದಕಕ್ಕೆ ಬಿದ್ದಿದೆ. ಆನೆಗಳನ್ನು ಬಲೆಗೆ ಬೀಳಿಸಲು ಗ್ರಾಮಸ್ಥರು ಮರದ ತೆಳ್ಳಗಿನ ಕೊಂಬೆಗಳು ಮತ್ತು ಬಿದಿರು ಎಲೆಗಳಿಂದ ಕಂದಕವನ್ನು ಮುಚ್ಚಿದ್ದರು.

ಇತ್ತೀಚೆಗೆ ಈ ಭಾಗದಲ್ಲಿ ಬೆಳೆದು ನಿಂತಿದ್ದ ಬೆಳೆಗಳನ್ನು ಆನೆಗಳು ನಾಶಪಡಿಸುವುದನ್ನು ತಪ್ಪಿಸಲು ರೈತರು ಖೆಡ್ಡಾ ತೋಡಿದ್ದರು. ಮೂರು ದಿನಗಳ ಹಿಂದೆ ಅಮೃತ್ ಎಂಬುವರಿಗೆ ಸೇರಿದ ಜಮೀನಿನಲ್ಲಿ 20 ಅಡಿ ಆಳದ ಕಂದಕ ತೋಡಿದ್ದರು.

ಇನ್ನು ಆನೆ ಮರಿ ಖೆಡ್ಡಕ್ಕೆ ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ವಾಗ್ವಾದ ನಡೆಸಿದರು. ಆನೆ ರಕ್ಷಣೆ ಕಾರ್ಯಾಚರಣೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದಾಗ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕೊನೆಗೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಅರಣ್ಯಾಧಿಕಾರಿಗಳು ಆನೆ ಮರಿಯನ್ನು ರಕ್ಷಿಸಿದರು. 

SCROLL FOR NEXT