ರಾಜ್ಯ

ಶಾಲಾ ಮಕ್ಕಳಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಜಾಗೃತಿ ಮೂಡಿಸಲು ಬಂಡೀಪುರ ಯುವ ಮಿತ್ರ ಯೋಜನೆಗೆ ಚಾಲನೆ

Manjula VN

ಮೈಸೂರು: ಶಾಲಾ ಮಕ್ಕಳಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಮಂಗಳವಾರ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರು ಬಂಡೀಪುರ ಯುವ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    
ಬಂಡೀಪುರ ಅರಣ್ಯದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಸಫಾರಿ ಪ್ರವಾಸಕ್ಕೆ ಕರೆದೊಯ್ಯಲು ಚಾಮರಾಜನಗರ ಜಿಲ್ಲಾಡಳಿತದ ಎರಡು ಬಸ್‌ಗಳಿಗೆ ಯಾದವ್ ಅವರು ಚಾಲನೆ ನೀಡಿದರು.

ಬಂಡೀಪುರಕ್ಕೆ ಎರಡು ದಿನಗಳ ಭೇಟಿ ನೀಡಿದ ಯಾದವ್ ಅವರು, ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಡೆದ 29 ಸದಸ್ಯರು ಭಾಗವಹಿಸಿದ್ದ 22ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
 
ಸಭೆಯಲ್ಲಿ ಹುಲಿ ಸಂರಕ್ಷಣೆ, ಹೆಚ್ಚಿದ ಮನುಷ್ಯ-ಪ್ರಾಣಿ ಸಂಘರ್ಷ, ಹುಲಿ ಯೋಜನೆಯಡಿ ಇನ್ನೂ ಕೆಲವು ಉದ್ಯಾನಗಳನ್ನು ಸೇರಿಸುವ ಪ್ರಸ್ತಾವನೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಬಂಡೀಪುರ ಸುತ್ತಮುತ್ತಲಿನ 140 ಗ್ರಾಮಗಳ ಶಾಲಾ ಮಕ್ಕಳಿಗೆ ಉಚಿತ ಸಫಾರಿ ಹಾಗೂ ಕಾರ್ಯಾಗಾರ, 10 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ವನ್ಯಜೀವಿ ಸಂರಕ್ಷಣೆ ಜಾಗೃತಿಗಾಗಿ ವಿವಿಧ ಕಾರ್ಯಕ್ರಮವನ್ನು ಬಂಡೀಪುರ ಯುವ ಮಿತ್ರ ಯೋಜನೆ ಒಳಗೊಂಡಿದೆ.

ವನ್ಯಜೀವಿ ಸಂರಕ್ಷಣಾ ಚಟುವಟಿಕೆಗಳಿಗೆ ಮಾನ್ಯತೆ ಪಡೆಯಲು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ. ಯೋಜನೆಯ ಆರಂಭಗೊಂಡ ಮೊದಲ ದಿನವಾದ ನಿನ್ನೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಸಫಾರಿಯಲ್ಲಿ ಪಾಲ್ಗೊಂಡರು. ಈ ವೇಳೆ ಮಕ್ಕಳಿಗೆ ಇಲಾಖೆಯಿಂದ ಉಚಿತ ಆಹಾರ ನೀಡಲಾಯಿತು. ಯೋಜನೆಯಲ್ಲಿ 140 ಗ್ರಾಮಗಳ ವಿದ್ಯಾರ್ಥಿಗಳಿಗೆ ಕಾಡ್ಗಿಚ್ಚು ತಪ್ಪಿಸುವುದು ಮತ್ತು ಮನುಷ್ಯ-ಪ್ರಾಣಿ ಸಂಘರ್ಷಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಕುರಿತು ತರಬೇತಿ ನೀಡಲಾಗುತ್ತಿದೆ.

SCROLL FOR NEXT