ಮಂಗಳೂರು: ವಿಧಾನಸಭಾ ಚುನಾವಣೆ ವೇಳೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೃಷ್ಣಪ್ಪ.ಜಿ ಅವರ ವಿರುದ್ದ ಕೆಲಸ ಮಾಡಿ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಹೊತ್ತು ಪಕ್ಷದಿಂದ ಉಚ್ಚಾಲಿಸಲ್ಪಟ್ಟ ಕಾಂಗ್ರೆಸ್ ಮುಖಂಡರು, ಇದೀಗ ದೈವದ ಮೊರೆ ಹೋಗಿದ್ದಾರೆ.
ಪ್ರಸಿದ್ದ ಕಾರಣಿಕ ಕ್ಷೇತ್ರ ಕೋಡಿಂಬಾಳ ಗ್ರಾಮದ ಮಜ್ಜಾರು ರಾಜನ್ ದೈವದ ಸಾನಿಧ್ಯಕ್ಕೆ ಮಂಗಳವಾರ ಆಗಮಿಸಿದ ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಸುಧೀರ್ ದೇವಾಡಿಗ, ಉಷಾ ಆಂಚನ್ ನೆಲ್ಯಾಡಿ,ಆಶಾ ಲಕ್ಷ್ಮಣ್ ಗುಂಡ್ಯ ಅವರುಗಳು ದೈವಗಳ ಎದುರು ಪ್ರಾರ್ಥಿಸಿದರು.
ಇದನ್ನೂ ಓದಿ: ಸುಳ್ಯ ವಿಧಾನಸಭಾ ಕ್ಷೇತ್ರ: ಅಂಗಾರ ವಿರುದ್ಧ ಬಿಜೆಪಿಯಲ್ಲಿ ಅಪಸ್ವರ; ಅಭ್ಯರ್ಥಿ ಬದಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಈ ವೇಳೆ ಕೃಷ್ಣಪ್ಪ ಅವರ ಕುಮ್ಮಕ್ಕಿನಿಮದಲೇ ನಮ್ಮನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ, ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಮಾಡಿದ್ದೇವೆ ಎಂದಾದರೆ ಕೃಷ್ಣಪ್ಪ ಅವರು ಬಂದು ದೈವದ ಎದುರು ಪ್ರಮಾಣ ಮಾಡಲಿ ಎಂದು ಸವಾಲೆಸೆದರು.
ನಾವು ಬೇರೆ ಯಾರನ್ನು ಬೆಂಬಲಿಸಿಲ್ಲ, ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ನಂದಕುಮಾರ್ ಅವರನ್ನು ಬೆಂಬಲಿಸಿದ್ದೇವೆ, ಅವರೇನು ಬೇರೆ ಪಕ್ಷದವರ, ಕಾಂಗ್ರೆಸ್ ಪಕ್ಷದವರಲ್ಲವೇ, ಅವರನ್ನು ಬೆಂಬಲಿಸಿದ ಕಾರಣ ನಾವು ಪಕ್ಷ ವಿರೋಧಿಗಳಾದ್ದೇವೆ. ಕಡಬ ಬ್ಲಾಕ್ ನಲ್ಲಿ ಕಾಂಗ್ರೆಸ್ ಬಲಪಡಿಸಲು ನಾವು ಸತತವಾಗಿ ದುಡಿದಿದ್ದೇವೆ, ಆದರೂ ನಮಗೆ ಅನ್ಯಾಯ ಮಾಡಲಾಗಿದೆ, ಅನ್ಯಾಯ ಮಾಡಿದವರಿಗೆ ಸರಿಯಾದ ಬುದ್ದಿ ದೈವವೇ ಕರುಣಿಸಲಿ ಎಂದು ದೈವದ ಮುಂದೆ ಕಣ್ಣೀರಿಟ್ಟರು.