ರಾಜ್ಯ

ಬೆಂಗಳೂರು: ಕೋಮು ಸೂಕ್ಷ್ಮ ಪ್ರದೇಶದ ಮಸೀದಿಗೆ ಹುಸಿ ಬಾಂಬ್ ಕರೆ; ದುಷ್ಕರ್ಮಿ ಪತ್ತೆಗೆ ಶೋಧ ಕಾರ್ಯ

Ramyashree GN

ಬೆಂಗಳೂರು: ನಗರದ ಕೋಮು ಸೂಕ್ಷ್ಮ ಪ್ರದೇಶವಾದ ಶಿವಾಜಿನಗರದಲ್ಲಿರುವ ಮಸೀದಿಯೊಂದಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ದುಷ್ಕರ್ಮಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಈ ಘಟನೆಯು ಸ್ಥಳೀಯರು ಮತ್ತು ಪೊಲೀಸರಲ್ಲಿ ಆತಂಕ ಮತ್ತು ಉದ್ವಿಗ್ನತೆಯನ್ನು ಉಂಟುಮಾಡಿದೆ.
ಬುಧವಾರ ತಡರಾತ್ರಿ ಘಟನೆ ನಡೆದಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ವಿಶೇಷವೆಂದರೆ, ದುಷ್ಕರ್ಮಿಯು ರಾಷ್ಟ್ರೀಯ ಪೊಲೀಸ್ ಸಹಾಯವಾಣಿ 112 ಕ್ಕೆ ಕರೆ ಮಾಡಿ, ಶಿವಾಜಿನಗರದ ಆಜಮ್ ಮಸೀದಿಯ ಆವರಣದಲ್ಲಿ ಭಯೋತ್ಪಾದಕರು ಬಾಂಬ್ ಇರಿಸಿದ್ದಾರೆ ಎಂದು ಹೇಳಿದ್ದಾನೆ.

ಕೂಡಲೇ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ, ಪೊಲೀಸ್ ಇಲಾಖೆ, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಶೋಧ ಕಾರ್ಯ ನಡೆಸಿದರು.

ಆತಂಕ ಮತ್ತು ಉದ್ವಿಗ್ನತೆ ಸೃಷ್ಟಿಸಲು ಬೆಂಗಳೂರಿನ ಹೊರಗಿನಿಂದ ಕರೆ ಮಾಡಲಾಗಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT