ರಾಜ್ಯ

ಕೋವಿಡ್ ಹಗರಣ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಪಿಎಸಿ ಶಿಫಾರಸು

Manjula VN

ಬೆಂಗಳೂರು: ಸಾಂಕ್ರಾಮಿಕ ರೋಗ ಸಮಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಶಿಫಾರಸು ಮಾಡಿದೆ.

ಸೋಮವಾರ ಸದನದಲ್ಲಿ ಕೋವಿಡ್‌ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆಯು ಕೈಗೊಂಡ ಕ್ರಮಗಳ ಕುರಿತು ನಡೆಸಿರುವ ವಿಶ್ಲೇಷಣಾತ್ಮಕ ವರದಿಯನ್ನು ಮಂಡಿಸಲಾಯಿತು. ಹಾಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಸಮಿತಿ ಅಧ್ಯಕ್ಷರಾಗಿದ್ದರು.

ಕೋವಿಡ್‌ ನಿಯಂತ್ರಣ ಸಂಬಂಧ ಉಪಕರಣಗಳು, ಔಷಧ ಸಾಮಗ್ರಿಗಳ ಖರೀದಿ, ಕೊರೋನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಂಚಿಕೆ, ವಿವಿಧ ಇಲಾಖೆಗಳಿಂದ ಭರಿಸಲಾಗಿದ್ದ ವೆಚ್ಚ ಕುರಿತಂತೆ ಪರಿಶೀಲನೆ ನಡೆಸಲು ಸಮಿತಿಗೆ ದಾಖಲೆಗಳನ್ನು ಸಲ್ಲಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿ ಸಾಕಷ್ಟು ಕಾಲಾವಕಾಶವನ್ನು ನೀಡಲಾಗಿತ್ತು. ಆದರೂ ಇಲಾಖೆಯು ದಾಖಲೆಗಳನ್ನು ಸಲ್ಲಿಕೆ ಮಾಡದ ಕಾರಣ ಸ್ವಾಯತ್ತ ತನಿಖಾ ಸಂಸ್ಥೆಯ ಮೂಲಕ ಹಗರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. ಇದೇ ವೇಳೆ ಮಾಹಿತಿ ನೀಡದ ಇಲಾಖಾ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಸಮಿತಿ ತೀರ್ಮಾನಿಸಿದೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಉಂಟಾದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಚ್‌ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ರಚಿಸಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಇಲಾಖೆಯು ಉತ್ತರ ನೀಡಿದೆ. ಆಯೋಗವು ವರದಿ ನೀಡಿದ ಬಳಿಕ ಅದನ್ನು ಸಮಿತಿಗೆ ನೀಡುವಂತೆ ಸೂಚಿಸಲಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳು ಸರ್ಕಾರವು ನಿಗದಿಪಡಿಸಿದ್ದ ದರಕ್ಕಿಂತ ಹೆಚ್ಚು ಲಸಿಕೆ ಸೇವಾ ಶುಲ್ಕವನ್ನು ಸಂಗ್ರಹಿಸುತ್ತಿರುವುದನ್ನು ಸಮಿತಿಯು ಗಮನಿಸಿದೆ. ಆದ್ದರಿಂದ ಅಧಿಕ ಶುಲ್ಕ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳನ್ನು ಪತ್ತೆ ಹಚ್ಚಲು ಇಲಾಖೆಯು ತಂಡಗಳನ್ನು ರಚಿಸಿ, ಅನಿರೀಕ್ಷಿತ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದೆ.

ಇಡೀ ಮನುಕುಲವನ್ನೇ ನಡುಗಿಸಿದ ಈ ಹೆಮ್ಮಾರಿಯ ಹೊಡೆತಕ್ಕೆ ಸಿಲುಕಿ ತತ್ತರಿಸಿ, ಅಪಾರ ಸಂಖ್ಯೆಯ ಸಾವು-ನೋವುಗಳು ಸಂಭವಿಸಿದರೂ ಜೀವಗಳ ಬೆಲೆಯನ್ನು ಅರ್ಥ ಮಾಡಿಕೊಂಡಿಲ್ಲ. ಒಂದೊಂದು ಜೀವವನ್ನು ಕಳೆದುಕೊಂಡ ಕುಟುಂಬಗಳ ನೋವನ್ನು ಅರಿತುಕೊಳ್ಳದೆ ಅತ್ಯಂತ ಬೇಜವಾಬ್ದಾರಿಯಿಂದ ಮರಣಗಳ ಸಂಖ್ಯೆಯನ್ನು ಕಡಿಮೆ ತೋರಿಸಿ ಇಲಾಖೆಯ ಅಧಿಕಾರಿಗಳು ಅಪರಾಧ ಎಸಗಿರುವುದು ಸಮಿತಿಯು ಗಮನಿಸಿದೆ.

ಐಸಿಎಂಆರ್‌ ಮಾರ್ಗದರ್ಶಿಗಳ ಪ್ರಕಾರ ಕೋವಿಡ್‌ ರೋಗಿಗಳಿಗೆ ಕ್ಯಾನ್ಸರ್‌, ಅಸ್ತಮ, ಹೃದ್ರೋಗ ಸಂಬಂಧಿತ ಕಾಯಿಲೆಗಳಿದ್ದರೆ, ಕೋವಿಡ್‌ ಸೋಂಕು ಉಂಟಾಗಿ ಸಾವನ್ನಪ್ಪಿದರೆ ಅಂತಹ ರೋಗಿಗಳು ಕೋವಿಡ್‌ನಿಂದ ಮೃತಪಟ್ಟಿಲ್ಲ ಎಂದು ತೀರ್ಮಾನಿಸಬೇಕು ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ ಸಮಿತಿಯು ರಾಜ್ಯದಲ್ಲಾಗಿರುವ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ, ಮಾನವೀಯ ದೃಷ್ಟಿಯಿಂದ ಮೃತರ ಕುಟುಂಬಗಳಿಗೆ ಪರಿಹಾರ ವಿತರಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಕಪ್ಪುಶಿಲೀಂಧ್ರ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಮುಕ್ತ ಮಾರುಕಟ್ಟೆಯಲ್ಲಿ ಔಷಧ ಲಭ್ಯವಿಲ್ಲದಿರುವುದನ್ನು ಸಾಬೀತುಪಡಿಸುವ ಯಾವುದೇ ಪೂರಕ ದಾಖಲೆಗಳನ್ನು ಸಮಿತಿಯು ಒತ್ತಾಯಿಸಿದ ನಂತರವು ಇಲಾಖೆಯ ಅಧಿಕಾರಿಗಳು ನೀಡಿರುವುದಿಲ್ಲ. ಕಪ್ಪುಶಿಲಿಂಧ್ರ ಚಿಕಿತ್ಸೆಗೆ ಬಳಸುವ ವಯಲ್ಸ್‍ಗಳನ್ನು ಹೆಚ್ಚು ಮೊತ್ತ ನೀಡಿ ಖರೀದಿಸಿದ್ದರಿಂದ 1.14 ಕೋಟಿ ರೂ.ಅಧಿಕ ವೆಚ್ಚವಾಗಿದೆ. ಈ ಲೋಪಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸೂಚನೆ ನೀಡಿದೆ.

ಐವರ್‌ಮೆಕ್ಟಿನ್ ಮಾತ್ರೆಗಳು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವುದಿಲ್ಲ ಎಂದು ಮಾರ್ಚ್ 2021 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು. ಆದರೂ, ಇಲಾಖೆಯು ಏಪ್ರಿಲ್ ಮತ್ತು ಮೇ 2021 ರ ನಡುವೆ ಮೂರು ಬಾರಿ 1.10 ಕೋಟಿ ಮಾತ್ರೆಗಳನ್ನು ಸಂಗ್ರಹಿಸಿದೆ. ಆಸ್ಪತ್ರೆಗಳಿಗೆ ಮಾತ್ರೆಗಳ ವಿತರಣೆ ಮಾಡಿರುವ ಬಗ್ಗೆ ವಿವರಗಳ ಸಂಗ್ರಹಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಡಬ್ಲ್ಯೂಹೆಚ್ಒ ಎಚ್ಚರಿಕೆಯ ನಂತರ ಈ ಮಾತ್ರಗಳ ಖರೀದಿಸದಿರಲು ತಮಿಳುನಾಡು ಸರ್ಕಾರ ನಿರ್ಧರಿಸಿತ್ತು. ಈ ಮಾತ್ರೆಗಳನ್ನು ನೀಡುವ ಮೂಲಕ ಇಲಾಖೆ ರೋಗಿಗಳ ಜೀವದ ಜೊತೆಗೆ ಆಟವಾಡಿರುವುದು ದುರಾದೃಷ್ಟಕರ ಸಂಗತಿ ಎಂದು ಸಮಿತಿ ಹೇಳಿದೆ,

SCROLL FOR NEXT