ರಾಜ್ಯ

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ತನಿಖಾ ವಿಧಾನವೇ ಪ್ರಶ್ನಾರ್ಹವಾಗಿದೆ; ಡಿಕೆಶಿ ಪರ ವಕೀಲರು

Manjula VN

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುತ್ತಿರುವ ತನಿಖಾ ವಿಧಾನವೇ ಪ್ರಶ್ನಾರ್ಹವಾಗಿದೆ ಎಂದು ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಪರ ವಕೀಲರು ಬಲವಾಗಿ ಪ್ರತಿರೋಧ ದಾಖಲಿಸಿದ್ದಾರೆ.

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ಮತ್ತು ಆ ಕುರಿತ ತನಿಖೆ ರದ್ದುಪಡಿಸುವಂತೆ ಕೋರಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಸಿಬಿಐ ವಕೀಲರ ಆಕ್ಷೇಪಣೆಗೆ ಡಿ ಕೆ ಶಿವಕುಮಾರ್ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ಅರ್ಜಿದಾರರ ವಿರುದ್ಧ ಮಾತ್ರವಲ್ಲವೇ ಅವರ ಕುಟುಂಬದ ಸದಸ್ಯರ ಮೇಲೂ ಆರೋಪ ಹೊರಿಸಲಾಗಿದೆ. ಕುಟುಂಬದ ಸದಸ್ಯರು ಗಳಿಸಿರುವ ಆದಾಯವನ್ನೂ ಶಿವಕುಮಾರ್ ಅವರ ವೈಯಕ್ತಿಕ ಆದಾಯ ಎಂದು ತನಿಖಾಧಿಕಾರಿಗಳು ಪರಿಗಣಿಸಿದ್ದಾರೆ.

ಆ ಮೂಲಕ ಅರ್ಜಿದಾರರು ನಿಗದಿಗಿಂತ ಹೆಚ್ಚಿನ ಆದಾಯ ಸಂಪಾದನೆ ಮಾಡಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ಕುಟುಂಬ ಸದಸ್ಯರ ಆದಾಯ ಪರಿಗಣಿಸಲು ಆಗುವುದಿಲ್ಲ. ಹೀಗಾಗಿ, ಸಿಬಿಐ ತನಿಖಾ ವಿಧಾನವೇ ಪ್ರಶ್ನಾರ್ಹವಾಗಿದೆ" ಎಂದು ಸಂಶಯ ವ್ಯಕ್ತಪಡಿಸಿದರು.

ಅಲ್ಲದೆ, ಸಿಬಿಐ ದಾಖಲಿಸಿದ ಎಫ್‌ಐಆರ್‌ನಲ್ಲಿ ಕುಟುಂಬದ ಸದಸ್ಯರ ಹೆಸರೇ ಇಲ್ಲ. ಪ್ರಮುಖ ಆರೋಪಿಯ ಅವಲಂಬಿತರು ಯಾರು ಎಂಬುದು ತಿಳಿಸಿಲ್ಲ. ಶಿವಕುಮಾರ್ ಅವರು ಸಾರ್ವಜನಿಕ ಸೇವಕರಾಗಿದ್ದಾರೆ. ಸಾರ್ವಜನಿಕ ಸೇವಕನ ವೆಚ್ಚ ಯಾವುದು ಎಂಬೆಲ್ಲಾ ಅಂಶಗಳು ಎಫ್‌ಐಆರ್‌ನಲ್ಲಿ ವಿವರಿಸಿಲ್ಲ. ವಿವರವಾದ ಅಂಶಗಳಿಲ್ಲದೇ ಎಫ್‌ಐಆರ್ ದಾಖಲಿಸಲು ಬರುವುದಿಲ್ಲ. ಇನ್ನೂ ಆದಾಯ ಪರಿಶೀಲನಾ ಅವಧಿ ಯಾವುದು. ಆ ಅವಧಿ ಯಾವಾಗ ಕೊನೆಗೊಂಡಿದೆ ಸೇರಿದಂತೆ ಇನ್ನಿತರ ಪ್ರಾಥಮಿಕ ಅಂಶಗಳು ತನಿಖಾ ವರದಿಯಲ್ಲಿ ಉಲ್ಲೇಖಗೊಂಡಿಲ್ಲ" ಎಂದು ವಾದಿಸಿದರು.

ನಿಯಮದ ಪ್ರಕಾರ ಈ ಪ್ರಕರಣವನ್ನು ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಗೆ ತನಿಖಾ ಜವಾಬ್ದಾರಿ ವಹಿಸಬೇಕು. ಆದರೆ, ಈ ಪ್ರಕರಣದಲ್ಲಿ ತನಿಖಾ ಅಧಿಕಾರವನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಲಾಗಿದೆ. ಇದು ಸಹ ಅನುಮಾನಸ್ಪದವಾಗಿದ್ದು, ಕೇಸ್ ಡೈರಿಯನ್ನು ತರಿಸಿಕೊಂಡು ನ್ಯಾಯಾಲಯ ಪರಿಶೀಲನೆ ನಡೆಸಬೇಕು” ಎಂದು ಕೋರಿದರು.

ಈ ವಾದಕ್ಕೆ ಸಿಬಿಐ ಪರ ವಕೀಲ ಪಿ ಪ್ರಸನ್ನಕುಮಾರ್ ತೀವ್ರವಾಗಿ ಆಕ್ಷೇಪಿಸಿದರು. ದಿನದ ಕಲಾಪ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿತು.

SCROLL FOR NEXT