ರಾಜ್ಯ

ಬೀದಿ ನಾಯಿ ಸಮೀಕ್ಷೆಗೆ ಡ್ರೋಣ್ ಬಳಕೆ; ಬಿಬಿಎಂಪಿ ಹೊಸ ಪ್ರಯೋಗ

Manjula VN

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರನಲ್ಲಿ ಎಷ್ಟು ಬೀದಿನಾಯಿಗಳಿವೆ ಎಂಬುದನ್ನು ಕಂಡುಕೊಳ್ಳಲು ಹೊಸ ಪ್ರಯೋಗಕ್ಕೆ ಮುಂದಾಗಿರುವ ಬಿಬಿಎಂಪಿ, ಸಮೀಕ್ಷೆಗೆ ಡ್ರೋಣ್ ಬಳಕೆ ಮಾಡಲು ಮುಂದಾಗಿದೆ.

ಈ ಪ್ರಯೋಗ ಇದೇ ಮೊದಲ ಬಾರಿಯಾಗಿದ್ದು, ಜುಲೈ 1ರಿಂದ ಸಮೀಕ್ಷೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಈ ಮೊದಲು ಬೈಕ್ ನಲ್ಲಿ ಸುತ್ತಿ ನಾಯಿಗಳನ್ನು ಲೆಕ್ಕ ಹಾಕಬೇಕಿತ್ತು. 2019ರಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಸುಮಾರು 3 ಲಕ್ಷ ನಾಯಿಗಳನ್ನ ಗುರುತಿಸಲಾಗಿತ್ತು. ನಂತರ ಅವುಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗಿತ್ತು. ಆ ನಂತರದಲ್ಲಿ ನಾಯಿಗಳ ಸಂಖ್ಯೆ ಎಷ್ಟಾಗಿದೆ ಎಂಬ ನಿಖರ ಮಾಹಿತಿಗಳಿಲ್ಲ.

ಹೀಗಾಗಿ ಇದೀಗ ಡ್ರೋಣ್ ಮೂಲಕ ಬೀದಿ ನಾಯಿಗಳ ಲೆಕ್ಕ ಹಾಕಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಇದಕ್ಕಾಗಿ 50 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಇರುತ್ತಾರೆ. ಒಬ್ಬರು ವಾಹನ ಚಲಾಯಿಸಿದರೆ ಮತ್ತೊಬ್ಬರು ನಾಯಿಯ ಚಿತ್ರ ತೆಗೆದು ಡೇಟಾ ಅಪ್ಲೋಡ್ ಮಾಡುತ್ತಾರೆ.

ಪ್ರತಿ ತಂಡ ಬೆಳಗ್ಗೆ 6ರಿಂದ 10ರವರೆಗೆ ದಿನಕ್ಕೆ 5 ಕಿಮೀ ಕ್ರಮಿಸಿ ಸಮೀಕ್ಷೆ ನಡೆಸಲಿದೆ. ತಂಡಗಳಿಗೆ ಸಮೀಕ್ಷೆ ನಡೆಸಲು ಆಯಾ ಪ್ರದೇಶಗಳನ್ನು ಕೂಡ ನಿಗದಿಪಡಿಸಲಾಗಿದೆ. ಡೇಟಾ ಆಧಾರದ ಮೇಲೆ ಪಶುಸಂಗೋಪನ ಇಲಾಖೆ 100 ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲಿದೆ. 15 ದಿನಗಳಲ್ಲಿ ಸಮೀಕ್ಷೆ ಮುಗಿಸುವ ಗುರಿ ಹೊಂದಿದ್ದು ಡೇಟಾವನ್ನು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ (ICAR)ಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಾಯೋಗಿಕ ಆಧಾರದ ಮೇಲೆ ಸಮೀಕ್ಷೆಗೆ ಡ್ರೋಣ್ ಗಳ ಬಳಕೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಹಲವಾರು ನಾಯಿ ಕಚ್ಚುವಿಕೆಯ ಪ್ರಕರಣಗಳು ವರದಿಯಾಗಿರುವುದರಿಂದ, ಅಧಿಕಾರಿಗಳು ವಿವಿಧ ಪ್ರದೇಶಗಳಲ್ಲಿ ನಾಯಿಗಳ ಸಂತತಿಯ ಮಾಹಿತಿಯನ್ನು ಪಡೆದು ಅವುಗಳನ್ನು ನಿಯಂತ್ರಿಸುವ ಕೆಲಸ ಮಾಡಲಿದ್ದಾರೆ. ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ಕ್ರಮಗಳು ಮತ್ತು ರೇಬೀಸ್ ವಿರೋಧಿ ಕಾರ್ಯಕ್ರಮಗಳ ಪ್ರಭಾವವನ್ನು ಅಧ್ಯಯನ ಮಾಡಲು ಸಮೀಕ್ಷೆಯ ವರದಿ ನಮಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT