ರಾಜ್ಯ

ಹಾಸನ ಡಿವೈಎಸ್ ಪಿ ವರ್ಗಾವಣೆ ಮಾಡಲು ಚುನಾವಣಾ ಆಯೋಗಕ್ಕೆ ಹೆಚ್ ಡಿ ರೇವಣ್ಣ ಒತ್ತಾಯ

Srinivas Rao BV

ಹಾಸನ: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಸನದ ಉಪವಿಭಾಗದ ಡಿವೈಎಸ್ ಪಿ ಉದಯ್ ಭಾಸ್ಕರ್ ಅವರನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. 

ಜಿಲ್ಲೆಯಲ್ಲಿ ಸಮಾಜವಿರೋಧಿ ಶಕ್ತಿಗಳನ್ನು ಈ ಅಧಿಕಾರಿ ಬೆಂಬಲಿಸುತ್ತಿದ್ದಾರೆ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೆಚ್ ಡಿ ರೇವಣ್ಣ ಆರೋಪಿಸಿದ್ದಾರೆ. 

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ರೇವಣ್ಣ, ಡಿವೈಎಸ್ ಪಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಈ ಅಧಿಕಾರಿ ರೌಡಿ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಈ ರೀತಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಿಲ್ಲೆಯ ಅಧಿಕಾರಿಗಳು ನ್ಯಾಯಸಮ್ಮತವಾದ ಚುನಾವಣೆ ನಡೆಸುವುದಕ್ಕೆ ಕಷ್ಟವಾಗಲಿದೆ ಎಂದು ರೇವಣ್ಣ ಹೇಳಿದ್ದಾರೆ. 

ಡಿವೈಎಸ್ ಪಿಯ ವರ್ಗಾವಣೆಗೆ ಮಾ.27 ವರೆಗೆ ಸರ್ಕಾರಕ್ಕೆ ಗಡುವು ನೀಡಿರುವ ರೇವಣ್ಣ, ಗಡುವು ಮೀರಿದರೆ, ಹಾಸನದ ಎಸ್ ಪಿ ಕಚೇರಿಯ ಎದುರು ಜೆಡಿಎಸ್ ಕಾರ್ಯಕರ್ತರು ಧರಣಿ ನಡೆಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ. 

ಈ ಸಂಬಂಧ ಐಜಿ ಹಾಗೂ ಡಿಜಿಗೂ ರೇವಣ್ಣ ಮನವಿ ಸಲ್ಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಹಾಸನ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರೇವಣ್ಣ, ಉಳಿದ ಕ್ಷೇತ್ರಗಳ ಜೊತೆಗೆ ಇನ್ನು ಕೆಲವೇ ದಿನಗಳಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನು ದೇವೇಗೌಡರು ಘೋಷಿಸಲಿದ್ದಾರೆ ಎಂದು ಹೇಳಿದ್ದಾರೆ. 

ಇನ್ನು ಇದೇ ವೇಳೆ ಹಾಸನ ನಗರಸಭೆ ಹಾಗೂ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಭ್ರಷ್ಟಾಚಾರದ ವಿಚಾರವಾಗಿ ರೇವಣ್ಣ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

SCROLL FOR NEXT