ರಾಜ್ಯ

ಪ್ರಧಾನಿ ಮೋದಿ ಬಂದು ಹೋದ ಬೆನ್ನಲ್ಲೇ ಇಂದು ಅಮಿತ್ ಶಾ ರಾಜ್ಯಕ್ಕೆ ಆಗಮನ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

Sumana Upadhyaya

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಚಟುವಟಿಕೆ ಬೇಸಿಗೆಯ ಬಿಸಿಲಿಗೆ ಕಾವೇರುತ್ತಿದೆ. ಏಪ್ರಿಲ್ ತಿಂಗಳ ಅಂತ್ಯದಲ್ಲಿ ಅಥವಾ ಮೇ ತಿಂಗಳ ಆರಂಭದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Elections 2023) ನಡೆಯಲಿದೆ.

ಚುನಾವಣೆ ಸಮಯ ಸಮೀಪಿಸುತ್ತಿದ್ದಂತೆ ಕೇಂದ್ರ ನಾಯಕರ ಸಂಚಾರ, ಪ್ರಚಾರ ಜೋರಾಗಿದೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಬಂದು ಹೋಗಿದ್ದರು. ಇಂದು ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಇಂದು ಬೀದರ್, ರಾಯಚೂರು, ಬೆಂಗಳೂರಿನಲ್ಲಿ ಪ್ರವಾಸ ಮಾಡಲಿದ್ದಾರೆ. 

ಬೀದರ್​ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿ: ಬೀದರ್​ನಲ್ಲಿ ಅಮಿತ್ ಶಾ ವಿವಿಧ ಕಾರ್ಯಕ್ರಮದಲ್ಲಿ‌ ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಬೀದರ್ ಏರ್ ಬೇಸ್ ನಿಂದ ಗೋರಟಾ ಗ್ರಾಮಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಆಗಮಿಸಿ, ಇನ್ನೂರು ಕನ್ನಡಿಗರ ಹತ್ಯೆಯಾದ ಸ್ಥಳದಲ್ಲಿ ಗ್ರಾಮಸ್ಥರ ಜೊತೆಗೆ ಅರ್ಧ ಗಂಟೆ ಸಂವಾದ ನಡೆಸಲಿದ್ದಾರೆ. ನಂತರ ಗೋರಟಾ ಗ್ರಾಮದ ಹುತಾತ್ಮರ ‌ಸ್ಮಾರಕ 103 ಅಡಿ ಎತ್ತರದ ಧ್ವಜ ಸ್ತಂಭ, ಸರ್ದಾರ್ ವಲ್ಲಭಭಾಯ್ ಪಟೇಲ್ ರ 11 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಲಿದ್ದಾರೆ.

ಪ್ರತಿಮೆ ಲೋಕಾರ್ಪಣೆ ‌ಬಳಿಕ ಕೇಶವ ಕಾರ್ಯ ಸಂವರ್ಧನ ಸಮೀತಿಯವರು ಆಯೋಜಿರುವ ವೇದಿಕೆ ಕಾರ್ಯಕ್ರಮದಲ್ಲಿ‌ ಭಾಗಿಯಾಗಲಿದ್ದಾರೆ. ಬೃಹತ್ ವೇದಿಕೆ ಕಾರ್ಯಕ್ರಮಕ್ಕೆ ಬೀದರ್, ತೆಲಂಗಾಣ, ಮಹಾರಾಷ್ಟ್ರ, ಕಲ್ಬುರ್ಗಿ ‌ಜಿಲ್ಲೆಯಿಂದ ಜನರು ಆಗಮಿಸಲಿದ್ದಾರೆ. 

ಮಧ್ಯಾಹ್ನ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಶಾ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ 5 ಗಂಟೆಗೆ ಬೆಂಗಳೂರಿಗೆ ಆಗಮಿಸಿ ರೇಸ್​ಕೋರ್ಸ್​ ರಸ್ತೆಯ ಖಾಸಗಿ ಹೋಟೆಲ್​ನಲ್ಲಿ ನಡೆಯಲಿರುವ ಗುಜರಾತ್​ ಸಮಾಜದ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಸಂಜೆ 6.30ಕ್ಕೆ ವಿಧಾನಸೌಧದ ಮುಂದೆ ಬಸವೇಶ್ವರ, ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ನಂತರ ಬೆಂಗಳೂರು ಹಬ್ಬದಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 8.30ಕ್ಕೆ ಖಾಸಗಿ ಹೋಟೆಲ್​ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು ಇಂದು ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅಮಿತ್ ಶಾ ವಾಸ್ತವ್ಯ ಹೂಡಿ ನಾಳೆ ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ.

SCROLL FOR NEXT