ರಾಜ್ಯ

ನನ್ನನ್ನೂ ಸೇರಿ 50 ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಐಟಿ ದಾಳಿಯಾಗುವ ಸಾಧ್ಯತೆಗಳಿವೆ: ಲಕ್ಷ್ಮೀ ಹೆಬ್ಬಾಳ್ಕರ್

Manjula VN

ಬೆಳಗಾವಿ: ನನ್ನನ್ನೂ ಸೇರಿ 50 ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಅವರ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ಮತ್ತು ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿಯವರು ಹತಾಶೆಗೊಳಗಾಗಿದ್ದು, ಇದಕ್ಕಾಗಿ ಕೆಲವು ವಾಮ ಮಾರ್ಗಗಳನ್ನು ಹಿಡಿಯುತ್ತಿರುವ ಬಗ್ಗೆ ಮಾಹಿತಿಗಳು ಕೇಳಿ ಬಂದಿವೆ. ಬೆಳಗಾವಿಯಲ್ಲಿ ನಾನು ಮತ್ತು ಮೂವರು ಸೇರಿದಂತೆ ಸುಮಾರು 50 ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅವರ ಸಂಬಂಧಿಕರ ಮೇಲೆ ಲೋಕಾಯುಕ್ತ, ಐಟಿ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಎಲ್ಲ ಕಡೆಗಳಲ್ಲಿ ನಮ್ಮ ಮಾಹಿತಿದಾರರು, ಕಾಂಗ್ರೆಸ್‍ಗೆ ಒಳ್ಳೆಯದನ್ನು ಬಯಸುವವರು ಇರುತ್ತಾರೆ. ಅವರಿಂದ ಈ ಮಾಹಿತಿ ತಿಳಿದು ಬಂದಿದೆ. ನಾವು ಯಾವುದೇ ತಪ್ಪು ಮಾಡಿಲ್ಲ. ಚುನಾವಣೆ ಕೇವಲ 10 ದಿನ ಮಾತ್ರ ಇದೆ. ಇಂತಹ ಸಮಯ ಕಡಿಮೆ ಇದ್ದ ಸಂದರ್ಭದಲ್ಲಿ ಕಾರ್ಯಕರ್ತರು, ಜನರನ್ನು ಗೊಂದಲಕ್ಕೆ ಇಡಾಗುವ ಪರಿಸ್ಥಿತಿ ತರಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.

ಯಾವುದೇ ಚುನಾವಣೆ ಬಂದಾಗ ವಿರೋಧ ಪಕ್ಷದವರ, ಮತದಾರರ ಗಮನ ಬೇರೆಡೆ ಹರಿಸುವುದು ಬಿಜೆಪಿಯ ಹವ್ಯಾಸವಾಗಿದೆ. ಸಮಯ ಬಹಳ ಮುಖ್ಯವಾಗಿದೆ. ಕೊನೆಯ ಹಂತದ ಪ್ರಚಾರದ ಸಂದರ್ಭದಲ್ಲಿ ಇಂತಹ ಮಾರ್ಗವನ್ನು ಬಿಜೆಪಿ ಕೈ ಬಿಡಬೇಕು. ನಾನೊಬ್ಬಳು ರಾಜ್ಯದ ಕಾಂಗ್ರೆಸ್ ವಕ್ತಾರೆ. ಸುಮಾರು 50 ಜನರಲ್ಲಿ ನನ್ನ ಮೇಲೂ ದಾಳಿ ಮಾಡುವ ಮಾಹಿತಿ ಇದೆ. ನನ್ನ ಸೋಲಿಸುವುದು, ಗೆಲ್ಲಿಸುವುದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನ. ಕಾರ್ಯಕರ್ತರು ಗೊಂದಲಕ್ಕೆ ಈಡಾಗುತ್ತಾರೆ. ಅಷ್ಟೇ ಹೊರತು ನನ್ನ ಕ್ಷೇತ್ರದ ಮೇಲೆ ಯಾವುದೇ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

ಕರ್ನಾಟಕದಲ್ಲಿ ಈ ಬಾರಿ ಎಲ್ಲ ಕಡೆ ಕಾಂಗ್ರೆಸ್ ಪರವಾದ ವಾತಾವರಣ ಶ್ರೀಸಾಮಾನ್ಯರಿಂದ ಕೇಳಿ ಬರುತ್ತಿದೆ. ರಾಜ್ಯದ ಮತದಾರರು ಕಾಂಗ್ರೆಸ್ ಸರಕಾರ ರಚನೆ ಮಾಡುವ ಮನಸ್ಸು ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿಯೂ ಉತ್ತಮವಾದ ವಾತಾವರಣ ಇದೆ. ಕಾಂಗ್ರೆಸ್‍ನ ಗ್ಯಾರಂಟಿ ಕಾರ್ಡ್‍ಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಯುವಕರಿಗೆ ಪ್ರೋತ್ಸಾಹ ಧನ, 10 ಕೆಜಿ ಅಕ್ಕಿ, ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ ಗ್ಯಾರಂಟಿಯಿಂದ ಬಿಜೆಪಿ ಹತಾಶವಾಗಿದೆ. ಜನರು ಬೆಲೆ ಏರಿಕೆಯಿಂದ ತತ್ತರಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ತಂದಿರುವ ಗ್ಯಾರಂಟಿ ಯೋಜನೆಯಿಂದ ಜನ ಕಾಂಗ್ರೆಸ್ ಮೇಲೆ ಭರವಸೆ ಇರಿಸಿದ್ದಾರೆ. ಕಾಂಗ್ರೆಸ್‍ನ ಪ್ರಣಾಳಿಕೆ ಜನಪ್ರಿಯ ಯೋಜನೆಯಾಗಿದೆ ಎಂದರು.

SCROLL FOR NEXT