ರಾಜ್ಯ

ಬಿಜೆಪಿ 120 ರಿಂದ 125 ಸೀಟು ಗೆಲ್ಲುವುದರಿಂದ ಆಪರೇಷನ್ ಕಮಲ ಮಾಡುವ ಪರಿಸ್ಥಿತಿ ಬರುವುದಿಲ್ಲ: ಶೋಭಾ ಕರಂದ್ಲಾಜೆ

Ramyashree GN

ಬೆಂಗಳೂರು: ‘ಆಪರೇಷನ್ ಕಮಲ’ದ ಸಾಧ್ಯತೆಯನ್ನು ತಳ್ಳಿಹಾಕಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 120 ರಿಂದ 125 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಗುರುವಾರ ಹೇಳಿದ್ದಾರೆ.

'ಆಪರೇಷನ್ ಕಮಲ' ಎಂಬ ಪದವನ್ನು ಹಲವಾರು ವರ್ಷಗಳ ಹಿಂದೆ ರಾಜ್ಯದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸೃಷ್ಟಿಸಿತು. ಈ ಹಿಂದೆ ಬಿಜೆಪಿ ಬಹುಮತ ಪಡೆಯಲು ವಿಫಲವಾದಾಗ 'ವಿರೋಧ ಪಕ್ಷದ ಚುನಾಯಿತ ಶಾಸಕರನ್ನು ಸೆಳೆಯಲು' ಬಿಜೆಪಿ ಮಾಡಿದ ಆಪಾದಿತ ಪ್ರಯತ್ನಗಳನ್ನು ಉಲ್ಲೇಖಿಸುತ್ತದೆ.

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗಿಂತ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನವನ್ನು ನೀಡಿದೆ. ಎಕ್ಸಿಟ್ ಪೋಲ್‌ಗಳು ತಪ್ಪೆಂದು ಪಕ್ಷವು ಸಾಬೀತುಪಡಿಸುತ್ತದೆ. ಪಕ್ಷವು ಸಂಪೂರ್ಮ ಬಹುಮತ ಪಡೆಯುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಹೇಳಿದರು. 

ಬಿಜೆಪಿಯು ಆಪರೇಷನ್ ಕಮಲದ ಮೊರೆ ಹೋಗಬೇಕೇ ಎಂಬ ಪ್ರಶ್ನೆಗೆ, 'ಖಂಡಿತ ಇಲ್ಲ. ನಂಬಿಕೆ ಇಡಿ. ಯಾವುದೇ ರೀತಿಯ 'ಆಪರೇಷನ್ ಕಮಲ'ದ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಬಾರಿ ರಾಜ್ಯದ ಜನತೆ ರಾಜ್ಯದ ಅಭಿವೃದ್ಧಿಗೆ ಮತ ನೀಡಿ ಬಹುಮತದ ಸರ್ಕಾರ ನೀಡಲಿದ್ದಾರೆ. ಅತಂತ್ರ ವಿಧಾನಸಭೆಯ ಪರಿಸ್ಥಿತಿ ಇರುವುದಿಲ್ಲ' ಎಂದರು.

ನಮ್ಮ ಬೂತ್ ಮಟ್ಟದ ಕಾರ್ಯಕರ್ತರಿಂದ ಪಡೆದ ಪ್ರಾಥಮಿಕ ವರದಿಗಳ ಪ್ರಕಾರ, ನಾವು 120 ರಿಂದ 125 ಸ್ಥಾನಗಳನ್ನು ಗೆಲ್ಲುತ್ತೇವೆ. ಕೆಲವು ಸ್ಥಾನಗಳಲ್ಲಿ ಪಕ್ಷವು 'ಊಹೆಗೂ ಮೀರಿದ' ಸಾಧನೆ ಮಾಡಿದೆ ಎಂದು ಕರಂದ್ಲಾಜೆ ಹೇಳಿದರು.

150 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಂಡಿದ್ದ ಪಕ್ಷವು ತನ್ನ ಅಂದಾಜನ್ನು 120ಕ್ಕೆ ಏಕೆ ಇಳಿಸಿತು ಎಂಬುದರ ಕುರಿತು ಪ್ರತಿಕ್ರಿಯಿಸಿದ ಅವರು, ಬೂತ್ ಮಟ್ಟದ ಕಾರ್ಯಕರ್ತರು ಅಲ್ಲಿಂದ ಪಡೆದ ಪ್ರಾಥಮಿಕ ವರದಿಯನ್ನು ಆಧರಿಸಿ ಇತ್ತೀಚಿನ ಲೆಕ್ಕಾಚಾರ ಮಾಡಲಾಗಿದೆ ಎಂದು ಅವರು ಹೇಳಿದರು.

SCROLL FOR NEXT