ರಾಜ್ಯ

ಆರ್‌ಎಸ್‌ಎಸ್ ಬ್ಯಾನ್ ವಿವಾದ: ಕಾಂಗ್ರೆಸ್ ಯೂ ಟರ್ನ್ !

Nagaraja AB

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆರ್ ಎಸ್ ಎಸ್ ನಿಷೇಧಿಸುವ ಪ್ರಸ್ತಾವನೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಅಂತಹ ಯಾವುದೇ ಹೇಳಿಕೆಗಳನ್ನು ಪಕ್ಷದಿಂದ ನೀಡಿಲ್ಲ ಎಂದು ಹೇಳುವ ಮೂಲಕ ಪಕ್ಷ ಯೂ ಟರ್ನ್ ಹೊಡೆದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಆರ್ ಎಸ್ ಎಸ್ ನಿಷೇಧಿಸುವ ಬಗ್ಗೆ ಪಕ್ಷದಿಂದ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂಬಂಧ ಕ್ಯಾಬಿನೆಟ್ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆ ರಾಜ್ಯದಲ್ಲಿ ಈಗಾಗಲೇ ವಿವಾದ ಹುಟ್ಟುಹಾಕಿದೆ. 

ಆರ್‌ಎಸ್‌ಎಸ್ ಅಥವಾ ಬಜರಂಗದಳ ಅಥವಾ ಯಾವುದೇ ಕೋಮುವಾದಿ ಸಂಘಟನೆಯಾಗಿರಲಿ, ನೈತಿಕ ಪೊಲೀಸ್ ಗಿರಿಯಲ್ಲಿ ತೊಡಗುವ ಸಂಘಟನೆಗಳನ್ನು ನಿಷೇಧಿಸಲು  ಹಿಂಜರಿಯುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಇತ್ತೀಚಿಗೆ ಹೇಳಿಕೆ ನೀಡಿದ್ದರು. ‘ಬಿಜೆಪಿ ಸರ್ಕಾರ ತಂದಿರುವ ಕಾನೂನನ್ನು  ಬದಲಾಯಿಸುತ್ತೇವೆ. ಯಾವುದೇ ವ್ಯಕ್ತಿ, ಸಂಘಟನೆ ಶಾಂತಿಗೆ ಧಕ್ಕೆ ತಂದರೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಾಮರ್ಥ್ಯ ಸರ್ಕಾರಕ್ಕಿದೆ ಎಂದು ಅವರು ಈ ಹಿಂದೆ ಸಮರ್ಥಿಸಿಕೊಂಡಿದ್ದರು.

ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಆರ್‌ಎಸ್‌ಎಸ್‌ ನಿಷೇಧಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದರು. ಆರೆಸ್ಸೆಸ್ ಅಥವಾ ಬಜರಂಗದಳವನ್ನು ನಿಷೇಧಿಸುವ ಪ್ರಯತ್ನ ಮಾಡಿದರೆ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಒಂದು ಶಾಖೆ ಮುಚ್ಚಿದರೆ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಎಲ್ಲಿಯೂ ಇರಲ್ಲ ಎಂದು ಆರ್ .ಅಶೋಕ್ ಸವಾಲ್ ಹಾಕಿದ್ದಾರೆ.

SCROLL FOR NEXT