ರಾಜ್ಯ

ಬೆಳಗಾವಿ ಗಡಿಯಲ್ಲಿ ಶಿವಸೇನೆ ಪುಂಡಾಟಿಕೆ: 50ಕ್ಕೂ ಹೆಚ್ಚು ಕಾರ್ಯಕರ್ತರು ಪೊಲೀಸರ ವಶ

Sumana Upadhyaya

ಚಿಕ್ಕೋಡಿ(ಬೆಳಗಾವಿ): ನವೆಂಬರ್ 1 ಕನ್ನಡ ರಾಜ್ಯೋತ್ಸವ ಬಂತೆಂದರೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(MES)ಯ, ಶಿವಸೇನೆ ಪುಂಡಾಟಿಕೆ ಮೆರೆಯುವುದು ಸಾಮಾನ್ಯವಾಗಿದೆ.

ಕನ್ನಡ ರಾಜ್ಯೋತ್ಸವ ವಿರುದ್ಧವಾಗಿ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಆಚರಿಸಲು ಗಡಿ ಪ್ರವೇಶಿಸಲು ಯತ್ನಿಸಿದ್ದ ಶಿವಸೇನೆ ಉದ್ಧವ್ ಠಾಕ್ರೆ ಬಣದ ಪುಂಡರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಶಿವಸೇನೆ ಉದ್ಧವ್ ಠಾಕ್ರೆ ಬಣ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಮಹಾರಾಷ್ಟ್ರದ ಗಡಿಯಲ್ಲೇ ತಡೆಯಲಾಯಿತು. ಪೊಲೀಸರು ವಾಹನದಲ್ಲಿ ವಾಪಸ್ ಕಾಗಲ್‌ಗೆ ಕರೆದುಕೊಂಡು ಹೋದರು.

ಕರ್ನಾಟಕ-ಮಹಾರಾಷ್ಟ್ರ ಗಡಿ ಕೊಗನೊಳ್ಳಿ ಹೊರವಲಯದಲ್ಲಿ ಶಿವಸೇನೆ ಪುಂಡರು ಇಂದು ಅರ್ಧಗಂಟೆ ಕಾಲ ಕರ್ನಾಟಕ ವಿರುದ್ಧ ಘೋಷಣೆ ಕೂಗಿದರು. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕೆಂದು ಘೋಷಣೆ ಹಾಕಿದರು.ನಿಷೇಧದ ನಡುವೆ ಇಂದು ಬೆಳಗ್ಗೆ ಮರಾಠಾ ಭವನ ಬಳಿ ಎಂಇಎಸ್ ಕಾರ್ಯಕರ್ತರು ಜಮಾವಣೆಗೊಳ್ಳಲಿದ್ದಾರೆ. ಮಹಾರಾಷ್ಟ್ರದ ಮೂರು ಜನ ಸಚಿವರು ಹಾಗೂ ಓರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ನಾಯಕರನ್ನು ತಡೆಯಲು ಗಡಿ ಭಾಗದಲ್ಲಿ 18 ಚೆಕ್ ಪೋಸ್ಟ್​​ಗಳನ್ನು ನಿರ್ಮಾಣ ಮಾಡಲಾಗಿದೆ.

ಮಹಾರಾಷ್ಟ್ರದ ನಾಯಕರು ಗಡಿ ಪ್ರವೇಶಕ್ಕೆ ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರಾಳ ದಿನ ಆಚರಣೆ ಹೆಸರಲ್ಲಿ ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಎಚ್ಚರಿಕೆ ನೀಡಿದ್ದಾರೆ.

SCROLL FOR NEXT